

Virat Kohli : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯ ಹಂತಕ್ಕೆ ಬಂದಿದೆ. ಮೊನ್ನೆಯಷ್ಟೇ (ಮೇ 27) ಲೀಗ್ ಪಂದ್ಯಗಳು ಮುಗಿದಿದ್ದು, ಇಂದಿನಿಂದ (ಮೇ 29) ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮುಲ್ಲನ್ಪುರದಲ್ಲಿ ಇಂದು ಸಂಜೆ 7.30 ಕ್ಕೆ ಆರಂಭವಾಗಲಿದೆ.
ಆರ್‌ಸಿಬಿ ತಂಡ ಪ್ಲೇಆಫ್ ತಲುಪಿರುವುದು ಇದು ಹತ್ತನೇ ಬಾರಿ. ಇಲ್ಲಿಯವರೆಗೆ, ಬೆಂಗಳೂರು ಮೂರು ಫೈನಲ್‌ಗಳಲ್ಲಿ ಆಡಿದೆ. ಆದರೆ, ಟ್ರೋಫಿ ಎತ್ತುವಲ್ಲಿ ವಿಫಲವಾಗಿದೆ. 2016ರಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿದ್ದ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋಲುಂಡಿತು. ಈ ಬಾರಿ ಮತ್ತೆ ಪ್ಲೇಆಫ್ ಪ್ರವೇಶಿಸಿರುವ ಆರ್‌ಸಿಬಿ, ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಕ್ವಾಲಿಫೈಯರ್ 1ರಲ್ಲಿ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿರುವ ಆರ್‌ಸಿಬಿಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಪ್ಲೇಆಫ್ ಅಂಕಿಅಂಶಗಳು ಕೊಂಚ ಚಿಂತಾಕ್ರಾಂತವಾಗಿದೆ.
ಆರ್‌ಸಿಬಿ ಇದುವರೆಗೆ 15 ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಡಿದೆ. ಎಲ್ಲ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಆಡಿದ್ದಾರೆ. ಆದರೆ, ಅವರ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಕೊಹ್ಲಿ ಅವರು 26 ರನ್ ಸರಾಸರಿ ಮತ್ತು 122 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 341 ರನ್‌ಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶ ಇದೀಗ ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿದೆ.
ಪ್ಲೇಆಫ್‌ನಲ್ಲಿ ವಿರಾಟ್ ಕೊಹ್ಲಿ ಅವರ ಒತ್ತಡದಿಂದಾಗಿ ಆರ್‌ಸಿಬಿ 10 ಬಾರಿ ಪ್ಲೇಆಫ್‌ಗೆ ಹೋದರೂ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಕೊಹ್ಲಿ, ಪ್ಲೇಆಫ್‌ನಲ್ಲಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಸೀಸನ್ನಲ್ಲಿ ಕೊಹ್ಲಿ 600 ರನ್‌ಗಳ ಗಡಿ ದಾಟಿದ್ದಾರೆ. ಹೀಗಿರುವಾಗ ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ ಕಿಂಗ್ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
* 2009 – ಫೈನಲ್ (ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್‌ಗಳಿಂದ ಸೋಲು)
* 2010 – ಸೆಮಿಫೈನಲ್ (ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್‌ಗಳಿಂದ ಸೋಲು)
* 2011 – ಫೈನಲ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು)
* 2015 – ಕ್ವಾಲಿಫೈಯರ್-2 (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳಿಂದ ಸೋಲು)
* 2016 – ಫೈನಲ್ (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋಲು)
* 2020 – ಎಲಿಮಿನೇಟರ್ (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳಿಂದ ಸೋಲು)
* 2021 – ಎಲಿಮಿನೇಟರ್ (ಕೋಲ್ಕತ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋಲು)
* 2022 – ಕ್ವಾಲಿಫೈಯರ್-2 (ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋಲು)
* 2024 – ಎಲಿಮಿನೇಟರ್ (ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋಲು)