ಕೆಲವೊಮ್ಮೆ ಇವರೆಲ್ಲ ಫಿಕ್ಸ್​... ಆರ್​ಸಿಬಿ ಟೀಕಿಸಿದ ಕಮೆಂಟೇಟರ್​ಗಳ ವಿರುದ್ಧ ಮಿ.360 ಕಿಡಿ | AB De Villiers

ವಿಜಯವಾಣಿ - 2025-05-29T125131.079
Published on

AB De Villiers: ಏಕನಾ ಕ್ರೀಡಾಂಗಣದಲ್ಲಿ ಮೇ.27ರಂದು ನಡೆದ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ರೋಚಕ ಜಯ ಸಾಧಿಸಿತು. ಪಂತ್ ಪಡೆ ನೀಡಿದ 228 ರನ್​ಗಳ ಬೃಹತ್​ ಗುರಿಯನ್ನು ಬೆನ್ನಟ್ಟುವಲ್ಲಿ ಆರ್​ಸಿಬಿ ಭರ್ಜರಿ ಯಶಸ್ವಿಯಾಯಿತು. ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ಮೂಲಕ ಕ್ರಿಕೆಟ್​ ಪ್ರೇಮಿಗಳಿಗೆ ಒಂದು ಸಿನಿಮಾ ಅನುಭವವನ್ನೇ ನೀಡಿದ ಜಿತೇಶ್ ಶರ್ಮ ಪಡೆಗೆ ಹಲವರು ಮೆಚ್ಚುಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಪಂದ್ಯದ ಮಧ್ಯೆ ನಡೆದ ಕಮೆಂಟೇಟರ್​ಗಳ ಟೀಕಿಸುವ ಮಾತಿಗೆ ಇದೀಗ ಮಾಜಿ ಕ್ರಿಕೆಟಿಗನಿಂದ ಭಾರೀ ಬೇಸರ ವ್ಯಕ್ತವಾಗಿದೆ.

ತಮ್ಮ ಫ್ರಾಂಚೈಸಿಯ ಆಟಗಾರರ ಕುರಿತು ಕಮೆಂಟೇಟರ್​ಗಳ ವ್ಯಂಗ್ಯ ಮಾತುಗಳಿಗೆ ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಆರ್​ಸಿಬಿ ಪಾಲಿಗೆ ಆಪತ್ಬಾಂಧವನಾಗಿ ಅಭಿಮಾನಿಗಳನ್ನು ರಂಜಿಸಿದ್ದ ಮಿ.360 ಕಿಡಿಕಾರಿದ್ದಾರೆ. ಲಖನೌ ವಿರುದ್ಧದ ರೋಚಕ ಪಂದ್ಯದಲ್ಲಿ ಪಂತ್​ ಪಡೆ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ, ಆರ್​ಸಿಬಿ ಬೌಲರ್​ಗಳನ್ನು ಎಂದಿನಂತೆ ಟೀಕಿಸಿದ ಕಮೆಂಟೇಟರ್​ಗಳ ವರ್ತನೆ ಎಬಿಡಿಗೆ ಭಾರೀ ಬೇಸರ ತಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಎಬಿಡಿ, ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ್ದಾರೆ.

ತೀವ್ರ ಕೋಪ

"ಆ ಪಂದ್ಯದ ವೇಳೆ ಕಾಮೆಂಟೇಟರ್‌ಗಳ ಮಾತುಗಳನ್ನು ನಾನು ಆಲಿಸಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ನನಗೆ ತೀವ್ರ ಕೋಪ ತರಿಸಿತು. ನಮ್ಮ ತಂಡ ಬೌಲಿಂಗ್​ ಮಾಡುವಾಗ, 'ಆರ್‌ಸಿಬಿಯ ಬೌಲಿಂಗ್ ಒತ್ತಡದಲ್ಲಿದೆ. ಅವರಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳುತ್ತಲೇ ಇದ್ದರು. 'ಆರ್​ಸಿಬಿ ಬೌಲಿಂಗ್ ಯೂನಿಟ್​ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ' ಎಂದೇ ಹೇಳ್ತಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ನನಗೆ ಅನಿಸಿದ್ದು, ಒಮ್ಮೊಮ್ಮೆ ಕಮೆಂಟೇಟರ್​ಗಳು ಸ್ಕ್ರಿಪ್ಟ್​ಗಳಿಗೆ ಫಿಕ್ಸ್ ಆಗಿರುತ್ತಾರೆ ಅಂತ. ಹೌದು, ಆರ್​ಸಿಬಿ ಒಂದು ಬಾರಿಯೂ ಕಪ್​ ಗೆದ್ದಿಲ್ಲ ನಿಜ. ಹಾಗಂತ ಬೌಲರ್​ಗಳು ಪ್ರಯೋಜನವಿಲ್ಲ. ಪದೇ ಪದೇ ಸೋಲ್ತಾರೆ ಎನ್ನುವುದು ಸರಿಯಲ್ಲ" ಎಂದರು.

"ಹೌದು, ಕೆಲವೊಮ್ಮೆ ಕಳಪೆ ಬೌಲಿಂಗ್ ಇತ್ತು. ಆದರೆ ಅಂತಿಮವಾಗಿ, ದೊಡದ್ದನ್ನೇ ನೋಡಿದ್ದೀರಿ. ಆ ಪಂದ್ಯದಲ್ಲಿ ಆರ್‌ಸಿಬಿ ಇನ್ನೂ ಸ್ಪರ್ಧೆಯಲ್ಲಿತ್ತು. ಕೊನೆಯವರೆಗೂ ಅವರು ಸೋಲೊಪ್ಪಿಕೊಳ್ಳಲಿಲ್ಲ, ಮತ್ತು ಎಲ್ಲರಿಗೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು" ಎಂದು ಎಬಿಡಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net