ಭೂಮಿಯಿಂದ ಹೊರಬರಲು ಮಹಾಬಲಿ ರೆಡಿ: ವರ್ಷಕ್ಕೊಮ್ಮೆ ಆಚೆ ಬರುವ ಈ ಕಪ್ಪೆಯ ವಿಶೇಷತೆ ನಿಮ್ಮ ಹುಬ್ಬೇರಿಸುತ್ತೆ! Maahabali frog

Maahabali frog
Published on

Maahabali frog : ಎಲ್ಲೆಡೆ ಮಳೆಗಾಲ ಆರಂಭವಾಗಿದೆ. ಹೀಗಾಗಿ ಭೂಗತ ಕಪ್ಪೆಗಳು ಯಾವುದೇ ಸಮಯದಲ್ಲಿ ಕಾಣಿಸಿಕೊಳ್ಳಬಹುದು. ಕೇರಳದ ಎರ್ನಾಕುಲಂ ಜಿಲ್ಲೆಯ ಪ್ಲಾಂಟೇಶನ್ ಕಾರ್ಪೊರೇಷನ್‌ನ ಎಝಾಟ್ಟುಮುಖಂನಲ್ಲಿ ನಿನ್ನೆ (ಮೇ 28) ನಡೆದ ಘಟನೆಯು ಪಾತಾಳ ಕಪ್ಪೆಗಳು ಭೂಗತದಿಂದ ಹೊರಬರಲು ತಯಾರಿ ನಡೆಸುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ.

ಎಝಾಟ್ಟುಮುಖಂನಲ್ಲಿ 15ನೇ ಬ್ಲಾಕ್‌ನಲ್ಲಿ ಜೆಸಿಬಿ ಬಳಸಿ ಮಣ್ಣು ಅಗೆದಾಗ ಪಾತಾಳ ಕಪ್ಪೆಯೊಂದು ಪತ್ತೆಯಾಗಿದೆ. ಈ ವೇಳೆ ಪಾತಾಳ ಕಪ್ಪೆ ಬೇರೆ ಸ್ಥಳಕ್ಕೆ ಜಿಗಿದಿದ್ದು, ಸ್ಥಳದಲ್ಲಿದ್ದ ಕೆಲವು ಜನರು ಅದನ್ನು ನೋಡಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ಭೂಮಿಯ ಒಳಗಿಂದ ಹೊರಗೆ ಬರುವ ಈ ಪಾತಾಳ ಕಪ್ಪೆಯನ್ನು ಮಹಾಬಲಿ ಅಂತಾನೂ ಕರೆಯುತ್ತಾರೆ. ಈ ವಿನಮ್ರ ಜೀವಿ ಬಗ್ಗೆ ಬಹುತೇಕ ಮಂದಿಗೆ ಇನ್ನೂ ಕನಿಷ್ಠ ಮಾಹಿತಿಯೂ ತಿಳಿದಿಲ್ಲ.

ಈ ಕಪ್ಪೆ 364 ದಿನಗಳ ಕಾಲ ನೆಲದಡಿಯಲ್ಲಿ ವಾಸಿಸುತ್ತದೆ. ಮಾನ್ಸೂನ್ ಪೂರ್ವ ಮಳೆಯ ಸಮಯದಲ್ಲಿ ಹೊರಬರುತ್ತದೆ. ಇದು ಮಿಲನದ ನಂತರ ಮೊಟ್ಟೆಯನ್ನು ಇಡಲು ಮಾತ್ರ ವರ್ಷಕ್ಕೆ ಒಮ್ಮೆ ಮಾತ್ರ ಹೊರಗೆ ಬರುತ್ತವೆ. ಅಳಿವಿನಂಚಿನಲ್ಲಿರುವ ಈ ಕಪ್ಪೆಗಳು ಪಶ್ಚಿಮ ಘಟ್ಟಗಳ ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವುಗಳ ವೈಜ್ಞಾನಿಕ ಹೆಸರು ನಾಸಿಕಬಾತ್ರಾಚಸ್ ಸಹ್ಯಡ್ರೆನ್ಸಿಸ್ ಎಂದು.

ಈ ಮಹಾಬಲಿ ಕಪ್ಪೆ ಹೊರಗಡೆ ಬಂದರೆ ಕೇರಳದ ಪಾಲಿಗೆ ಶುಭ ಸೂಚನೆಯಾಗಿದೆ. ಏಕೆಂದರೆ, ಪ್ರತಿ ವರ್ಷ ಓಣಂ ಹಬ್ಬಕ್ಕೂ ಮುಂಚೆಯೇ ಇದು ಕಾಣಿಸಿಕೊಳ್ಳುತ್ತದೆ. ಇದೀಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಝಾಟ್ಟುಮುಖಂನಲ್ಲಿ ಮಹಾಬಲಿ ಕಾಣಿಸಿಕೊಂಡಿದೆ. ಈ ಬಾರಿ ಓಣಂ ಹಬ್ಬ ಆಗಸ್ಟ್ 26ರಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿದೆ.

ಈ ಮಹಾಬಲಿ ಕಪ್ಪೆ ನದಿಗಳು ಮತ್ತು ತೊರೆಗಳ ಬಳಿಯ ಮಣ್ಣಿನಲ್ಲಿ ವಾಸಿಸುತ್ತವೆ ಮತ್ತು ಎರೆಹುಳುಗಳು, ಗೆದ್ದಲುಗಳು, ಇರುವೆಗಳು ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಅರಣ್ಯ ಇಲಾಖೆಯ ಶಿಫಾರಸಿನಂತೆ ಮಹಾಬಲಿ ಕಪ್ಪೆಯನ್ನು ರಾಜ್ಯದ ಅಧಿಕೃತ ಕಪ್ಪೆ ಎಂದು ಘೋಷಿಸಲು ಕ್ರಮಕೈಗೊಳ್ಳಲಾಗಿದೆ.

ಗುಣಲಕ್ಷಣಗಳೇನು?

ಈ ಕಪ್ಪೆಯು ಚಿಕ್ಕ ಕಾಲುಗಳನ್ನು ಹೊಂದಿದ್ದು, ಕಡು ಬಣ್ಣದಲ್ಲಿರುತ್ತದೆ. ಇದರ ದೇಹವು ಸುಮಾರು ಏಳು ಸೆಂಟಿಮೀಟರ್ ಉದ್ದವಿರುತ್ತದೆ ಮತ್ತು ಉಬ್ಬಿಕೊಂಡಿರುವಂತೆ ಕಾಣುತ್ತದೆ. ಇದರ ಮೊನಚಾದ ಮೂಗುಗಳಿಂದಾಗಿ ಹಂದಿ ಮೂತಿ ಎಂದೂ ಕರೆಯುತ್ತಾರೆ. ದಪ್ಪ ಸ್ನಾಯುಗಳನ್ನು ಹೊಂದಿರುವ ಸಣ್ಣ ಕಾಲುಗಳು ಮತ್ತು ತೋಳುಗಳು ಮಣ್ಣಿನಲ್ಲಿ ಅಗೆಯಲು ಸಹಾಯ ಮಾಡುತ್ತದೆ. ಆದರೆ, ಅದರ ಹಿಂಗಾಲುಗಳು ತುಂಬಾ ಚಿಕ್ಕದಾದ ಕಾರಣ, ಇತರ ಕಪ್ಪೆಗಳಂತೆ ಇದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜಿಗಿಯುವುದಿಲ್ಲ. ಹೆಣ್ಣು ಕಪ್ಪೆಗಳು ಗಂಡು ಕಪ್ಪೆಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ವರ್ಷಕ್ಕೊಮ್ಮೆ ಹೊರ ಪ್ರಪಂಚಕ್ಕೆ ತರುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net