ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ: ಕಂಚು ಗೆದ್ದು ಇತಿಹಾಸ ಬರೆದ ಮನು ಭಾಕರ್​

Manu Bhaker
Published on

ಪ್ಯಾರಿಸ್​: ಫ್ರಾನ್ಸ್​ ರಾಜಧಾನಿ ಪ್ಯಾರಿಸ್​​​ನಲ್ಲಿ ನಡೆಯುತ್ತಿರುವ​ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕಗಳ ಖಾತೆಯನ್ನು ತೆರೆದಿದೆ. ಮೊದಲ ದಿನ ಯಾವುದೇ ಪದಕಗಳಿಲ್ಲದೆ ನಿರಾಸೆಗೊಂಡಿದ್ದ ಭಾರತಕ್ಕೆ ಎರಡನೇ ದಿನ ಪದಕ ಲಭಿಸಿದೆ. ಹರಿಯಾಣ ಮೂಲದ 22 ವರ್ಷದ ಶೂಟರ್​ ಮನು ಭಾಕರ್ ಮಹಿಳೆಯರ 10 ಮೀಟರ್​ ಏರ್​ ಪಿಸ್ತೂಲ್​ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಡುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್​ ಅವರು 27 ಇನ್ನರ್​ ಸರ್ಕಲ್​ 10s ಒಳಗೊಂಡಂತೆ 580 ಅಂಕಗಳೊಂದಿಗೆ 3ನೇ ಸ್ಥಾನವನ್ನು ಪಡೆದು ಫೈನಲ್​ ಸುತ್ತಿಗೆ ಲಗ್ಗೆಯಿಟ್ಟಿದ್ದರು. ಇಂದು ಮಧ್ಯಾಹ್ನ 3.30ಕ್ಕೆ ಚಟೌರೊಕ್ಸ್ ಶೂಟಿಂಗ್ ಸೆಂಟರ್​ನಲ್ಲಿ ನಡೆದ ಫೈನಲ್​ ಸುತ್ತಿನಲ್ಲಿ 3ನೇ ಸ್ಥಾನದೊಂದಿಗೆ ಕಂಚಿನ ಪದಕವನ್ನು ಜಯಿಸಿ, ಇತಿಹಾಸ ಬರೆದಿದ್ದಾರೆ. ಪ್ರಸಕ್ತ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಭಾಜನರಾಗಿದ್ದಾರೆ.

ಮನು ಭಾಕರ್​ ಅವರು 221.7 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ದಕ್ಷಿಣ ಕೊರಿಯಾದ ಒಹ್​ ಯೆ ಜಿನ್​ 243.2 ಅಂಕಗಳನ್ನು ಗಳಿಸಿ, ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಉಳಿದಂತೆ ಮತ್ತೊಬ್ಬ ಕೊರಿಯನ್​ ಜಿ ಯೆಜಿನ್​ 241.3 ಅಂಕಗಳೊಂದಿಗೆ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದರು.

ಕಳೆದ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರಂಭದಲ್ಲೇ ಹೊರಬಿದ್ದು ಆಘಾತ ಅನುಭವಿಸಿದ್ದ ಭಾಕರ್​, ಮೂರು ವರ್ಷಗಳ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಪದಕ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಲ್ಲದೆ, ಶೂಟಿಂಗ್‌ ವಿಭಾಗದಲ್ಲಿ 12 ವರ್ಷಗಳ ಬಳಿಕ ಭಾರತವು ಪದಕವನ್ನು ಜಯಿಸಿದೆ.

ಇದೇ ಸಂದರ್ಭದಲ್ಲಿ ಅರ್ಜುನ್ ಬಾಬುತಾ ಮತ್ತು ರಮಿತಾ ಜಿಂದಾಲ್ ಅವರು ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಮತ್ತಷ್ಟು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net