

ನ್ಯೂಯಾರ್ಕ್: ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳು ಅತಿಥ್ಯ ವಹಿಸಿಕೊಂಡಿರುವ ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯ ಮೊದಲ ಹಂತದಲ್ಲಿಯೇ ಮನೆಗೆ ಹಿಂತಿರುಗಿದ ಪಾಕಿಸ್ತಾನ ತಂಡಕ್ಕೆ ಇದೀಗ ವ್ಯಾಪಕ ಟೀಕೆಗಳು, ಛೀಮಾರಿ ವ್ಯಕ್ತವಾಗುತ್ತಿವೆ. ಇದೆಲ್ಲದರ ಮಧ್ಯೆ ಹೊಸ ಆರೋಪವನ್ನು ಎದುರಿಸುತ್ತಿರುವ ಬಾಬರ್ ಆಜಂ ಮತ್ತು ತಂಡದ ಸಹ ಆಟಗಾರರು, ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಡಬದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಇಷ್ಟು ದಿನ ಅತ್ಯಂತ ಕಳಪೆ ಪ್ರದರ್ಶನಕ್ಕೆ ಪಾಕ್ನ ಕ್ಯಾಪ್ಟನ್ ಬಾಬರ್ ಮತ್ತು ತಂಡದ ಆಟಗಾರರು ಸಾಲು ಸಾಲು ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದರು. ಆದ್ರೆ, ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸ್ಪಾಟ್ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿದೆ. ತಂಡದ ಆಟಗಾರರು ಮತ್ತು ನಾಯಕ ಬಾಬರ್ ಈ ಮೋಸದಲ್ಲಿ ತೊಡಗಿದೆ. ಅವರನ್ನು ತಂಡದಿಂದ ಕಿತ್ತು ಬಿಸಾಡಿ ಎಂದು ನೆಟ್ಟಿಗರು ಪಾಕ್ ಕ್ರಿಕೆಟ್ ಮಂಡಳಿಯನ್ನು ಉಲ್ಲೇಖಿಸಿ, ಆರೋಪಿಸಿದ್ದಾರೆ.
ಇನ್ನು ಈ ವಿಷಯದಿಂದ ತೀವ್ರ ಸಿಟ್ಟಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಕಡೆಗೂ ಇಲ್ಲಸಲ್ಲದ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದೆ. ನಮ್ಮ ತಂಡದ ಯಾವುದೇ ಆಟಗಾರರು ಅಥವಾ ಕ್ಯಾಪ್ಟನ್ ಬಾಬರ್ ಅವರೇ ಆಗಲಿ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿರುವುದನ್ನು ನೀವು ಸಾಕ್ಷಿ ಸಮೇತ ಸಾಬೀತು ಮಾಡಬೇಕು. ಅದನ್ನು ಹೊರತುಪಡಿಸಿ, ಈ ರೀತಿ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಅಖಿಲ ಭಾರತ ಮುಕ್ತ ಫಿಡೆ ಚೆಸ್ ಪಂದ್ಯಾವಳಿ 22, 23ರಂದು
ತಂಡದ ವಿರುದ್ಧ ಅಭಿಮಾನಿಗಳೇ ಆಗಲಿ ಅಥವಾ ನೆಟ್ಟಿಗರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆದುಕೊಂಡರು, ಅಸಭ್ಯವಾಗಿ ಕಮೆಂಟ್ ಮಾಡಿದರೂ ನಮಗೆ ಬೇಸರವಿಲ್ಲ. ಅದನ್ನು ನಾವು ಪ್ರಶ್ನಿಸುವುದೂ ಇಲ್ಲ. ಆದ್ರೆ, ಈ ರೀತಿ ದೊಡ್ಡ ದೊಡ್ಡ ಆರೋಪಗಳನ್ನು ಸುಖಾಸುಮ್ಮನೆ ಹಬ್ಬಿಸುವುದಾದರೆ ಖಂಡಿತ ಅದಕ್ಕೆ ನಮ್ಮ ಆಕ್ಷೇಪಣೆ ಇದೆ ಎಂದು ಪಿಸಿಬಿ ತಿಳಿಸಿದೆ,(ಏಜೆನ್ಸೀಸ್).