

ಬೆಂಗಳೂರು: ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದೂಡಿದ್ದೆ ತಡ ಭಾರತೀಯ ಕ್ರಿಕೆಟಿಗರು ಸೇರಿದಂತೆ ವಿಶ್ವದ ಹಲವು ಕ್ರಿಕೆಟಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಏಕೆಂದರೆ, ಟಿ20 ವಿಶ್ವಕಪ್ ಬದಲಿಗೆ ಐಪಿಎಲ್ ಆಡುವ ಉತ್ಸಾಹದಲ್ಲಿ ಆಟಗಾರರಿದ್ದಾರೆ. ಆದರೆ. ಪಾಕಿಸ್ತಾನದ ಮಾಜಿ ಆಟಗಾರರು ಮಾತ್ರ ಬಹಿರಂಗವಾಗಿ ಐಸಿಸಿ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ ನಿರ್ಧಾರ ಪ್ರಕಟಿಸಿದ್ದೆ ತಡ, 13ನೇ ಆವೃತ್ತಿಯ ಐಪಿಎಲ್ ಚಟುವಟಿಕೆ ಗರಿಗೆದರಿದೆ. ಬಿಸಿಸಿಐ ಕೂಡ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಅತ್ತ ಪಾಕಿಸ್ತಾನ ಮಾಜಿ ಕ್ರಿಕೆಟಿಗರಾದ ಶೋಯಿಬ್ ಅಖ್ತರ್ ಹಾಗೂ ರಶೀದ್ ಲತೀಫ್ ಮಾತ್ರ ಐಸಿಸಿ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಐಪಿಎಲ್ ಆಯೋಜಿಸಲು ಅನುವು ಮಾಡಿಕೊಡುವ ಸಲುವಾಗಿ ಐಸಿಸಿ ವಿಶ್ವಕಪ್ ಮುಂದೂಡಿದೆ. ಕ್ರಿಕೆಟ್ ಪವರ್ ಹೌಸ್ ಎದುರು ಐಸಿಸಿ ಶರಣಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಪಾಕ್‌ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್, ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಐಪಿಎಲ್‌ಗಾಗಿ ಬಲಿಕೊಡಲಾಗಿದೆ ಎಂದಿದ್ದಾರೆ. ಐಪಿಎಲ್‌ಗಾಗಿ ಟಿ20 ವಿಶ್ವಕಪ್ ನರಕ ಸೇರಿದೆ ಎಂದು ರಶೀದ್ ಲತೀಫ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಸಮಸ್ಯೆಯಿಂದಾಗಿ ಪಾಕ್ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ. ತಂಡದ ಸಹಾಯಕ ಸಿಬ್ಬಂದಿ ಹಾಗೂ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಲು ಅವಕಾಶ ನಿರಾಕರಿಸಲಾಗಿದೆ.