

ಲಾಹೋರ್: ಇತ್ತೀಚೆಗಷ್ಟೇ ಬಹಿ ಅಜ್ಮಾನ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ‘ಕ್ರಿಕೆಟ್ ಪ್ರಿಡಿಕ್ಟಾ ಕಾನ್ಕ್ಲೇವ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ‘ಏಷ್ಯನ್ ಬ್ರಾಡ್ಮನ್’ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ಕ್ರಿಕೆಟ್ ದಿಗ್ಗಜ (Pak Cricket Legend) ಜಹೀರ್ ಅಬ್ಬಾಸ್ (Zaheer Abbas), “ಪಾಕಿಸ್ತಾನದಲ್ಲಿ ಅತೀ ಹೆಚ್ಚಾಗಿ ಟಿ20 ಪಂದ್ಯಗಳನ್ನು ಆಡಲಾಗುತ್ತಿದೆ. ಆದ್ರೆ, ನಮ್ಮ ಆಟಗಾರರು ಮಾತ್ರ ಕ್ರಿಕೆಟ್ನ ಮೌಲ್ಯವನ್ನೇ ಮರೆತು, ಹಣದ ಹಿಂದೆ ಓಡಲು ಪ್ರಾರಂಭಿಸಿದ್ದಾರೆ. ಇದೇ ಕಾರಣಗಳಿಂದ ಅವರು ಯಾವುದೇ ಸರಣಿಯಲ್ಲಿ ಉತ್ತಮವಾಗಿ ಆಡುತ್ತಿಲ್ಲ. ಪಂದ್ಯಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದರು. ಈ ಮೂಲಕ ಪಾಕ್ ಆಟಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಅಬ್ಬಾಸ್, ಮುಂಬರುವ ದಿನಗಳಲ್ಲಿ ತಂಡಕ್ಕೆ ಒಂದೊಳ್ಳೆ ಕೊಡುಗೆ ನೀಡುವತ್ತ ಹೆಚ್ಚು ಶ್ರಮಿಸಿ ಎಂದು ಒತ್ತಿ ಹೇಳಿದರು.
ಇನ್ನು 2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಪಾಕ್ ನೆಲದಲ್ಲಿ ಟೀಮ್ ಇಂಡಿಯಾ ಬಂದು ಆಡಬೇಕು ಎಂದು ಕಳೆದ ಹಲವು ತಿಂಗಳಿಂದ ಬಿಸಿಸಿಐ ಮತ್ತು ಐಸಿಸಿಯನ್ನು ಒತ್ತಾಯಿಸಿದೆ. ಆದ್ರೆ, ಭಾರತೀಯ ಕ್ರಿಕೆಟ್ ಮಂಡಳಿ ಮಾತ್ರ ಭಾರತ ತಂಡವನ್ನು ಪಾಕ್ ನೆಲಕ್ಕೆ ಕಳಿಸಲು ಸುತಾರಾಮ್ ಒಪ್ಪುತ್ತಿಲ್ಲ. ಇದೊಂದು ಕಾರಣಕ್ಕೆ ಟೀಮ್ ಇಂಡಿಯಾದ ಆಟಗಾರರನ್ನು ಟೀಕಿಸಿ, ಕೆಣಕುವ ಮೂಲಕ ಅವರನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಬೇಕು ಎಂಬ ಪಾಕ್ ಮಾಜಿ ಕ್ರಿಕೆಟಿಗರ ಬಿರುಸಿನ ಸಂಚುಗಳು ಇದೀಗ ವಿಫಲದ ಹಾದಿ ಹಿಡಿದಿವೆ. ಸದ್ಯ ಇದೇ ವಿಷಯವನ್ನು ಉಲ್ಲೇಖಿಸಿದ ಅಬ್ಬಾಸ್, ಭಾರತ ತಂಡ ಪಾಕಿಸ್ತಾನ ಟೂರ್ ಆಡಬೇಕು. ಏಕೆಂದರೆ, ಇದು ಉಪಖಂಡದಲ್ಲಿ ವಿಶೇಷವಾಗಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
"ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಇಲ್ಲಿಯೇ ಆಡಬೇಕು ಎಂದು ನಾನು ಬಯಸುತ್ತೇನೆ. ಭಾರತ ತಂಡವು ಕ್ರಿಕೆಟ್ನ ರಾಯಭಾರಿಯಾದ ಹಿನ್ನಲೆ ಅವರು ನಮ್ಮ ನೆಲದಲ್ಲಿ ಆಡುವುದರಿಂದ ಕ್ರಿಕೆಟ್ನ ಹಿರಿಮೆ ಮತ್ತಷ್ಟು ಹೆಚ್ಚುತ್ತದೆ" ಎಂದು ಮೆಚ್ಚಿ ಮಾತನಾಡಿದರು. ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ಅಬ್ಬಾಸ್ ಅವರ ಮೆಚ್ಚುಗೆಯ ಮಾತುಗಳನ್ನು ಕೇಳಿದ ಮೇಲೆ ಐಸಿಸಿ ಮತ್ತು ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ? ಟೀಮ್ ಇಂಡಿಯಾವನ್ನು ಪಾಕ್ಗೆ ಕಳಿಸಲಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).