

ನವದೆಹಲಿ: ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿರುವ ನಡುವೆ ದೇಶದಲ್ಲಿ ಆನ್ಲೈನ್ ಮೂಲಕ ಕ್ರೀಡಾ ತರಬೇತಿ ನಿರಂತರವಾಗಿ ಸಾಗಿದೆ. ಇದೀಗ ಕಳಂಕಿತ ಕ್ರೀಡಾಪಟುಗಳ ಉದ್ದೀಪನ ಪ್ರಕರಣಗಳ ವಿಚಾರಣೆಯನ್ನೂ ಆನ್ಲೈನ್ ಮೂಲಕ ನಡೆಸಲು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ಮುಂದಾಗಿದೆ. ಲಾಕ್ಡೌನ್ನಿಂದಾಗಿ ಕ್ರೀಡಾಪಟುಗಳಿಗೆ ವಿಚಾರಣೆಯನ್ನು ಎದುರಿಸಲು ಕುದ್ದಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶುಕ್ರವಾರದಿಂದ ಆನ್ಲೈನ್ ಮೂಲಕ ಕ್ರೀಡಾಪಟುಗಳ ವಿಚಾರಣೆ ಪ್ರಕ್ರಿಯೆ ನಡೆಯಲಿದೆ ಎಂದು ನಾಡಾದ ಪ್ರಧಾನ ನಿರ್ದೇಶಕ ನವೀನ್ ಅಗರ್ವಾಲ್ ತಿಳಿಸಿದ್ದಾರೆ.
‘ಉದ್ದೀಪನ ನಿಗ್ರಹ ಶಿಸ್ತು ಸಮಿತಿ (ಎಡಿಡಿಪಿ) ಮತ್ತು ಉದ್ದೀಪನ ನಿಗ್ರಹ ಮೇಲ್ಮನವಿ ಸಮಿತಿ (ಎಡಿಎಪಿ) ಬಾಕಿ ಉಳಿದಿರುವ ಉದ್ದೀಪನ ಪ್ರಕರಣಗಳ ವಿಚಾರಣೆಯನ್ನು ಶುಕ್ರವಾರ ಆರಂಭಿಸಲಿದೆ. ಅಂತರ್ಜಾಲದ ಸಂಪರ್ಕ ಲಭ್ಯವಿಲ್ಲದ ಪ್ರದೇಶಗಳಲ್ಲಿ ಇರುವ ಕಳಂಕಿತ ಕ್ರೀಡಾಪಟುಗಳು ಆಡಿಯೋ ಕಾಲ್ ಮೂಲಕವೂ ವಿಚಾರಣೆ ಎದುರಿಸಬಹುದು’ ಎಂದು ಅಗರ್ವಾಲ್ ಬುಧವಾರ ತಿಳಿಸಿದ್ದಾರೆ. ಕಳೆದ ವರ್ಷ ದಾಖಲೆಯ ಸಂಖ್ಯೆಯ ಪ್ರಕರಣಗಳನ್ನು ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲಾಗಿತ್ತು. ಒಟ್ಟಾರೆ 180 ಪ್ರಕರಣಗಳು ಇತ್ಯರ್ಥಗೊಂಡಿದ್ದವು ಎಂದವರು ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಈಗ ಕ್ರೀಡಾಪಟುಗಳ ಉದ್ದೀಪನ ಪರೀಕ್ಷೆ ನಡೆಸುವುದು ನಾಡಾಗೆ ಸಾಧ್ಯವಾಗುತ್ತಿಲ್ಲ. ಕೆಲ ಕ್ರೀಡಾಪಟುಗಳು ಎನ್ಐಎಸ್ ಪಟಿಯಾಲಾ ಮತ್ತು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಅಲ್ಲಿಗೆ ಹೊರಗಿನವರ ಪ್ರವೇಶ ನಿರ್ಬಂಧಿಸಲಾಗಿದೆ. ಇದೀಗ ಅಲ್ಲಿರುವ ಕ್ರೀಡಾಪಟುಗಳ ಉದ್ದೀಪನ ಪರೀಕ್ಷೆಗಾದರೂ ಅವಕಾಶ ಕಲ್ಪಿಸಬೇಕೆಂದು ಕ್ರೀಡಾ ಸಚಿವಾಲಯವನ್ನು ವಿನಂತಿಸಲಾಗಿದೆ. ಉದ್ದೀಪನ ಪರೀಕ್ಷೆಗೆ ತೆರಳುವ ವೈದ್ಯರು ಕೋವಿಡ್-19ರ ಲಕ್ಷಣಗಳನ್ನು ಹೊಂದಿಲ್ಲ ಮತ್ತು ಕಳೆದ 14 ದಿನಗಳಿಂದ ಯಾವುದೇ ಕರೊನಾ ಸೋಂಕಿತರ ಸಂಪರ್ಕ ಹೊಂದಿರಲಿಲ್ಲ ಎಂಬುದನ್ನೂ ದೃಢಪಡಿಸಿಕೊಳ್ಳಲಿದ್ದೇವೆ ಎಂದು ಅಗರ್ವಾಲ್ ತಿಳಿಸಿದ್ದಾರೆ. -ಪಿಟಿಐ/ಏಜೆನ್ಸೀಸ್