ಐಪಿಎಲ್ ಗೆಲ್ಲಲು ಆರೆಂಜ್ ಕ್ಯಾಪ್ ಸಾಲಲ್ಲ… ವಿರಾಟ್​ ವಿರುದ್ಧ ಮತ್ತೆ ಸಿಡಿದೆದ್ದ ರಾಯಡು! ಕೊಹ್ಲಿ ಮೇಲೆ ಯಾಕಿಷ್ಟು ಕೋಪ?

WhatsApp Image 2024-05-27 at 6.22.53 PM
Published on

ಬೆಂಗಳೂರು: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ಕೊಲ್ಕತಾ ನೈಟ್ ರೈಡರ್ಸ್​ ಪಡೆ 8 ವಿಕೆಟ್​ಗಳ ಅಂತರದಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸಿ, ವಿಜಯದ ಪತಾಕೆ ಹಾರಿಸಿತು. ಇನ್ನು ಕೆಕೆಆರ್​ ಸಂಭ್ರಮದ ಮಧ್ಯೆ ​ಇತರೆ ಕಮೆಂಟೇಟರ್​ಗಳೊಂದಿಗೆ ಸಂಭಾಷಣೆ ನಡೆಸಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು, ಇಲ್ಲಿಯೂ ಸಹ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಕೌಟ್​ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಹೀನಾಯವಾಗಿ ಸೋಲಿಸಿದ ಆರ್​ಸಿಬಿ ಅಂದು ತನ್ನ ಗೆಲುವನ್ನು ಸಂಭ್ರಮಿಸಿದ ರೀತಿ ಕಂಡು ಅಂಬಟಿ ರಾಯಡು ತೀವ್ರ ಸಿಟ್ಟಾಗಿದ್ದರು. ಅದರಲ್ಲೂ ಆರ್​ಸಿಬಿ ಪರ ಸ್ಟಾರ್​ ಬ್ಯಾಟ್ಸ್​ಮನ್​ ಆದ ವಿರಾಟ್ ಕೊಹ್ಲಿ, ಪಂದ್ಯ ಗೆಲ್ಲುತ್ತಿದ್ದಂತೆ ಕಿರುಚಿ, ಕುಣಿದು, ಸಂಭ್ರಮಿಸಿದ್ದನ್ನು ಸಹ ವಿರೋಧಿಸಿ ಮಾತನಾಡಿದ್ದರು. ಸಿಎಸ್​ಕೆ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ, ಎಲಿಮಿನೇಟರ್​ ಮ್ಯಾಚ್​ನಲ್ಲಿ ರಾಜಸ್ಥಾನ ರಾಯಲ್ಸ್​ ಎದುರು ಸೋಲುಂಡಿತು. ಇದೇ ವಿಷಯವನ್ನು ಮುಂದಿಟ್ಟು, ವಿರಾಟ್​ರನ್ನು ಟೀಕಿಸಿದ ರಾಯಡು, ಕಿರುಚಾಡಿ, ಕೂಗಾಡಿದರೆ ಏನೂ ಫಲ ಎಂದು ಲೇವಡಿ ಮಾಡಿದ್ದರು.

ಎಲಿಮಿನೇಟರ್​ ಪಂದ್ಯ ಮುಗಿದ ಬಳಿಕವೂ ತಣ್ಣಗಾಗದ ಅಂಬಟಿ ರಾಯಡು, "ವಿರಾಟ್​ ಮೊದಲು ತಮ್ಮ ಸ್ಟ್ಯಾಂಡರ್ಡ್ಸ್​​ ಅನ್ನು ಬಿಟ್ಟು, ತಂಡದ ಸಹ ಆಟಗಾರರಿಗೂ ಪ್ರಾಮುಖ್ಯತೆ ನೀಡಬೇಕು. ಎಲ್ಲರೂ ವಿರಾಟ್ ಆಗಲು ಸಾಧ್ಯವಿಲ್ಲ" ಎಂದಿದ್ದರು. ಇದಕ್ಕೆ ಆರ್​ಸಿಬಿ ಫ್ಯಾನ್ಸ್ ಅಂಬಟಿ ವಿರುದ್ಧ​ ವ್ಯಾಪಕ ಆಕ್ರೋಶ ಕೂಡ ಹೊರಹಾಕಿದ್ದರು. ಇನ್ನೂ ನಿನ್ನೆಯ ಫೈನಲ್ ಪಂದ್ಯ ಮುಗಿದ ಬಳಿಕವೂ ಮತ್ತೆ ವಿರಾಟ್ ಕಾಲೆಳೆದ ರಾಯಡು, "ಐಪಿಎಲ್ ಗೆಲ್ಲಲು ಕೇವಲ ಆರೆಂಜ್ ಕ್ಯಾಪ್ ಸಾಲಲ್ಲ. ಒಬ್ಬೊಬ್ಬರಿಂದ ತಲಾ 300 ರನ್‌ಗಳ ಕೊಡುಗೆ ಬೇಕು" ಎಂದು ವ್ಯಂಗ್ಯವಾಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆ ನೀಡಿದ ರಾಯಡು ವಿರುದ್ಧ ಇದೀಗ ಆರ್​ಸಿಬಿ ಅಭಿಮಾನಿಗಳು ತೀವ್ರ ಕಿಡಿಕಾರಿದ್ದು, 'ನಿಮಗೇನಾಗಿದೆ? ವಿರಾಟ್ ಕೊಹ್ಲಿ ಸಾಧನೆ ಕಂಡರೆ ನಿಮಗೆ ಆಗುವುದಿಲ್ಲವೇ ಅಥವಾ ನಿಮ್ಮ ನೆಚ್ಚಿನ ಸಿಎಸ್​ಕೆ ತಂಡವನ್ನು ಆರ್​ಸಿಬಿ ಸೋಲಿಸಿದ್ದನ್ನು ನಿಮ್ಮಿಂದ ಸಹಿಸಲು ಆಗ್ತಿಲ್ಲವೇ? ಅಸಲಿಗೆ ನಿಮ್ಮ ಸಮಸ್ಯೆಯನ್ನು ನಮ್ಮೊಂದಿಗೆ ಹೆಂಚಿಕೊಳ್ಳಿ, ಅದನ್ನು ಬಿಟ್ಟು ಈ ರೀತಿ ಮಾತನಾಡುವುದು ನಿಮಗೆ ಶೋಭೆ ತರಲ್ಲ' ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net