10 ತಿಂಗಳ ಬಳಿಕ ಅಂತಾರಾಷ್ಟ್ರೀಯ ಟೂರ್ನಿ ಆಡಲಿರುವ ಪಿವಿ ಸಿಂಧು, ಸೈನಾ ನೆಹ್ವಾಲ್

saina and pv sindhu for web
Published on

ಬ್ಯಾಂಕಾಕ್: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 10 ತಿಂಗಳಿಂದ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದ ಭಾರತದ ಸ್ಟಾರ್ ಷಟ್ಲರ್‌ಗಳಾದ ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮಂಗಳವಾರ ಆರಂಭವಾಗಲಿರುವ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಕಳೆದ ಎರಡು ತಿಂಗಳಿಂದ ಲಂಡನ್‌ನಲ್ಲಿ ತರಬೇತಿ ಪಡೆದಿದ್ದು, ಕರೊನಾ ಕಾಲದಲ್ಲಿ ಚೊಚ್ಚಲ ಟ್ರೋಫಿ ಜಯಿಸಲು ಸನ್ನದ್ಧರಾಗಿದ್ದಾರೆ. ಕರೊನಾದಿಂದ ಚೇತರಿಕೆ ಕಂಡು ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿರುವ ಸೈನಾ ನೆಹ್ವಾಲ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ.

ಸೈನಾ ಹಾಗೂ ಸಿಂಧು ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಹಾಗೂ ಸಾರ್‌ಲೊರ್‌ಲಕ್ಸ್ ಸೂಪರ್-100 ಟೂರ್ನಿಗಳಲ್ಲಿ ಸ್ಪರ್ಧಿಸಿರಲಿಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಕಡೆಯ ಬಾರಿಗೆ ಸೈನಾ, ಸಿಂಧು ಕಾಣಿಸಿಕೊಂಡಿದ್ದರು. ಏಷ್ಯಾ ಚರಣದ ಟೊಯೊಟಾ ಥಾಯ್ಲೆಂಡ್ ಓಪನ್ (ಜ.19-24), ಎಚ್‌ಎಸ್‌ಬಿಸಿ ಬಿಡಬ್ಲ್ಯುಎ್ ವರ್ಲ್ಡ್ ಟೂರ್ ಫೈನಲ್ಸ್ 2020 (ಜ.27-31) ನಡೆಯಲಿದೆ. ಏಷ್ಯಾ ಚರಣದಿಂದ ಜಪಾನ್ ಹಾಗೂ ಚೀನಾ ತಂಡಗಳು ಹಿಂದೆ ಸರಿದಿವೆ.

6ನೇ ಶ್ರೇಯಾಂಕ ಹೊಂದಿರುವ ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್ಫೆಫೆಲ್ಡ್ ಅವರನ್ನು ಎದುರಿಸಲಿದ್ದಾರೆ. ಜಪಾನ್‌ನ ನವೊಮಿ ಒಕುಹರಾ ಹಿಂದೆ ಸರಿದ ಹಿನ್ನೆಲೆಯಲ್ಲಿ ಮೊದಲ ಸುತ್ತಿನಲ್ಲಿ ಸೈನಾ ನೆಹ್ವಾಲ್ ಮಲೇಷ್ಯಾದ ಕಿಸೊನಾ ಸೆಲ್ವಾಡುರೆ ಎದುರಾಗಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್, ಸಾಯಿ ಪ್ರಣೀತ್, ಎಚ್‌ಎಸ್ ಪ್ರಣಯ್, ಸಮೀರ್ ವರ್ಮ, ಪಿ.ಕಶ್ಯಪ್, ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಹೋರಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net