‘ದಿ ವಾಲ್’ ಬರ್ತ್ ಡೇಗೆ ಟೀಮ್ ಇಂಡಿಯಾ ಭರ್ಜರಿ ಗಿಫ್ಟ್...!

rahul dravid for web
Published on

ಬೆಂಗಳೂರು: ವಿಶ್ವ ಟೆಸ್ಟ್ ಕ್ರಿಕೆಟ್‌ನ ‘ದಿ ವಾಲ್’ ಖ್ಯಾತಿ ರಾಹುಲ್ ದ್ರಾವಿಡ್ ಸೋಮವಾರ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅತ್ತ ಸಿಡ್ನಿಯಲ್ಲಿ ಭಾರತ ಡ್ರಾ ಸಾಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದ್ರಾವಿಡ್‌ಗೆ ‘ಭರ್ಜರಿ ಗಿಫ್ಟ್’ ಎಂದು ವಿಶ್ಲೇಷಿಸಲಾಯಿತು. ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ, ದ್ರಾವಿಡ್‌ಗೆ ಟೀಮ್ ಇಂಡಿಯಾ ಅತ್ಯುತ್ತಮ ಬರ್ತ್‌ಡೇ ಗಿಫ್ಟ್ ನೀಡಿದೆ ಎಂದು ಟ್ವೀಟಿಸಿದರು. ದಿಗ್ಗಜ ಕ್ರಿಕೆಟಿಗರು ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಶುಭಾಶಯ ಕೋರಿದ್ದಾರೆ. ಸ್ವತಃ ದ್ರಾವಿಡ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರೂ ಶುಭಾಶಯಗಳ ಮಹಾಪೂರವೇ ಹರಿದು ಬಂತು.

ಟೆಸ್ಟ್ ಕ್ರಿಕೆಟ್‌ನಲ್ಲೇ ತಮ್ಮದೇ ಛಾಪು ಮೂಡಿಸಿರುವ ದ್ರಾವಿಡ್, ಇಂದಿಗೂ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯುತ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪಾಲಿಗೆ ವಾಲ್‌ನಂತೆ ಕಾರ್ಯನಿರ್ವಹಿಸಿದ್ದ ದ್ರಾವಿಡ್, ನಿವೃತ್ತಿ ಹೊಂದಿದ ಬಳಿಕ ಕೋಚಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮನಸು ಮಾಡಿದ್ದರೆ ಟೀಮ್‌ ಇಂಡಿಯಾ ಕೋಚ್ ಆಗಿರುತ್ತಿದ್ದರು. ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ದ್ರಾವಿಡ್ ಜನ್ಮದಿನದಂದೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ.

ಐಸಿಸಿ ಹಾಗೂ ಬಿಸಿಸಿಐ ಟ್ವಿಟರ್ ಖಾತೆಗಳಲ್ಲಿ ದ್ರಾವಿಡ್ ಹುಟ್ಟುಹಬ್ಬಕ್ಕೆ ಶುಭಕೋರಲಾಗಿದೆ. ದಿಗ್ಗಜ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ದ್ರಾವಿಡ್ ಸಮಕಾಲಿನ ಕ್ರಿಕೆಟಿಗರಿಂದ ಹಿಡಿದು ಹಿರಿಯ ಹಾಗೂ ಕಿರಿಯ ಆಟಗಾರರು ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net