ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿ ತಾರೆ ಬಬಿತಾ ಪೋಗಟ್

babita pogat web
Published on

ನವದೆಹಲಿ: ಕ್ರೀಡಾಕ್ಷೇತ್ರಕ್ಕೆ ಸೋಮವಾರ ಡಬಲ್ ಸಂಭ್ರಮ. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ ಬೆನ್ನಲ್ಲೇ, ಕುಸ್ತಿ ತಾರೆ ಬಬಿತಾ ಪೋಗಟ್ ಗಂಡು ಮಗುವಿಗೆ ಜನ್ಮ ನೀಡಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಬಬಿತಾ ಪೋಗಟ್ ಮತ್ತು ಪೈಲ್ವಾನ್ ವಿವೇಕ್ ಸುಹಾಗ್ ದಂಪತಿ ಸೋಮವಾರ ಮೊದಲ ಮಗುವಿನ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಮಗುವಿನ ಚಿತ್ರವನ್ನೂ ಪ್ರಕಟಿಸಿದ್ದಾರೆ. ‘ನಮ್ಮ ಪುಟ್ಟ ‘ಸನ್’ಶೈನ್ ಅನ್ನು ಭೇಟಿಯಾಗಿ. ಕನಸುಗಳಲ್ಲಿ ನಂಬಿಕೆ ಇಡಿ. ಅವು ನಿಜವಾಗುತ್ತವೆ. ನಮ್ಮ ಕನಸು ನೀಲಿ ಉಡುಪಿನೊಂದಿಗೆ ಆಗಮಿಸಿದೆ’ ಎಂದು ಬಬತಾ ಪೋಗಟ್ ಸೋಮವಾರ ಸಂಜೆ ಟ್ವೀಟಿಸಿದ್ದಾರೆ. ಇದಕ್ಕೆ ಕೆಲವೇ ನಿಮಿಷಗಳ ಮುನ್ನ ಕೊಹ್ಲಿ ಕೂಡ ಮಗುವಿನ ಜನನದ ಸುದ್ದಿಯನ್ನು ಪ್ರಕಟಿಸಿದ್ದರು.

ಬಬಿತಾ ಪೋಗಟ್ ಮತ್ತು ವಿವೇಕ್ ಸುಹಾಗ್ 2019ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಬಾಲಿವುಡ್‌ನಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡ ‘ದಂಗಲ್’ ಸಿನಿಮಾಗೆ ಪೋಗಟ್ ಕುಟುಂಬದ ಯಶೋಗಾಥೆಯೇ ಸ್ಫೂರ್ತಿಯಾಗಿತ್ತು. ಹರಿಯಾಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿ ಸೋಲು ಕಂಡಿದ್ದ 31 ವರ್ಷದ ಬಬಿತಾ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net