More

    ಸಿರಾಜ್‌ಗೆ ಮತ್ತೆ ಜನಾಂಗೀಯ ನಿಂದನೆ, 6 ಪ್ರೇಕ್ಷಕರ ಬಂಧನ

    ಸಿಡ್ನಿ: ಭಾರತೀಯ ಕ್ರಿಕೆಟಿಗರು, ಅದರಲ್ಲೂ ಪ್ರಮುಖವಾಗಿ ವೇಗಿ ಮೊಹಮದ್ ಸಿರಾಜ್ 3ನೇ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲೂ ಆಸ್ಟ್ರೇಲಿಯಾದ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. 3ನೇ ದಿನದಾಟದ ಬಳಿಕ ಭಾರತ ತಂಡದ ದೂರು ಸಲ್ಲಿಸಿದ ಹೊರತಾಗಿಯೂ ಮರುದಿನವೂ ಪ್ರೇಕ್ಷಕರ ದುರ್ವರ್ತನೆ ಮುಂದುವರಿಯಿತು. ಇದರಿಂದ ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), ಭಾರತ ತಂಡದ ಬಳಿ ಬೇಷರತ್ ಕ್ಷಮೆಯಾಚಿಸಿದ್ದರೆ, ಐಸಿಸಿ ಕೂಡ ಈ ಘಟನೆಯನ್ನು ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡ ಬಗ್ಗೆ ವರದಿಯನ್ನು ಸಲ್ಲಿಸುವಂತೆಯೂ ಐಸಿಸಿ, ಸಿಎಗೆ ಸೂಚಿಸಿದೆ.

    ‘ಆತಿಥೇಯರಾಗಿ ನಾವು ಯಾವುದೇ ಬಿಗುಮಾನವಿಲ್ಲದೆ ಭಾರತ ತಂಡದ ಸ್ನೇಹಿತರ ಬಳಿಕ ಕ್ಷಮೆಯಾಚಿಸುತ್ತೇವೆ. ಪ್ರಕರಣದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡುತ್ತೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಭದ್ರತಾ ವಿಭಾಗದ ಮುಖ್ಯಸ್ಥ ಸೀನ್ ಕ್ಯಾರೋಲ್ ತಿಳಿಸಿದ್ದಾರೆ. ತಪ್ಪಿತಸ್ಥರಿಗೆ ಸುದೀರ್ಘ ನಿಷೇಧ ಹೇರುವೆವು ಎಂದಿದ್ದಾರೆ. 6 ಪ್ರೇಕ್ಷಕರು ಸದ್ಯ ನ್ಯೂ ಸೌತ್ ವೇಲ್ಸ್ ಪೊಲೀಸರ ವಶದಲ್ಲಿದ್ದಾರೆ.

    ಇದನ್ನೂ ಓದಿ:  ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದ ಆಸೀಸ್

    ‘ಇಂಥ ಭೇದಭಾವದ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಹೇಳಿದ್ದಾರೆ. ಐಸಿಸಿ ಕೂಡ ಘಟನೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ನಮ್ಮ ಕ್ರೀಡೆಯಲ್ಲಿ ಯಾವುದೇ ರೀತಿಯ ಭೇದಭಾವಗಳಿಗೆ ಜಾಗವಿಲ್ಲ. ಪ್ರೇಕ್ಷಕರಿಗೂ ಇಂಥ ವರ್ತನೆ ತೋರಲು ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಕಠಿಣ ಕ್ರಮವನ್ನು ಎದುರು ನೋಡುತ್ತಿದ್ದೇವೆ’ ಎಂದಿದೆ. ಶನಿವಾರ ಪಂದ್ಯದ 3ನೇ ದಿನದಾಟದಲ್ಲೂ ಜಸ್‌ಪ್ರೀತ್ ಬುಮ್ರಾ ಮತ್ತು ಸಿರಾಜ್ ಸಹಿತ ಭಾರತ ತಂಡದ ಕೆಲ ಆಟಗಾರರು ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಎದುರಿಸಿದ್ದರು.

    4ನೇ ದಿನದಾಟಕ್ಕೆ ಅಡಚಣೆ
    4ನೇ ದಿನದಾಟದಲ್ಲಿ ಆಸೀಸ್ 2ನೇ ಇನಿಂಗ್ಸ್‌ನಲ್ಲಿ ಭಾರತೀಯರು ಫೀಲ್ಡಿಂಗ್ ಮಾಡುತ್ತಿದ್ದಾಗ ಪ್ರೇಕ್ಷಕರ ಗುಂಪಿನಿಂದ ಜನಾಂಗೀಯ ನಿಂದನೆ ಪುನರಾವರ್ತನೆಗೊಂಡಿದೆ. ಇದನ್ನು ಸಿರಾಜ್ ಕೂಡಲೆ ಮೈದಾನದ ಅಂಪೈರ್ ಮತ್ತು ನಾಯಕ ಅಜಿಂಕ್ಯ ರಹಾನೆ ಸಹಿತ ಹಿರಿಯ ಆಟಗಾರರ ಗಮನಕ್ಕೆ ತಂದರು. ಬಳಿಕ ಭದ್ರತಾ ಸಿಬ್ಬಂದಿ 6 ಮಂದಿ ಪ್ರೇಕ್ಷಕರನ್ನು ಬಂದಿಸಿ ಕರೆದೊಯ್ದರು. ಇದರಿಂದ 10 ನಿಮಿಷಗಳ ಕಾಲ ಆಟಕ್ಕೆ ಅಡಚಣೆಯೂ ಎದುರಾಯಿತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಆಸೀಸ್ ನಾಯಕ ಟಿಮ್ ಪೇನ್ ಕೂಡ ಭಾರತ ತಂಡಕ್ಕೆ ಬೆಂಬಲವಾಗಿ ನಿಂತಿದ್ದರು.

    ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?

    ನಾಯಿ, ಮಂಗ ಬೈಗುಳ
    ‘ಬ್ರೌನ್ ಡಾಗ್’ ಮತ್ತು ‘ಬಿಗ್ ಮಂಕಿ’ ಎಂದು ವೇಗಿ ಮೊಹಮದ್ ಸಿರಾಜ್‌ಗೆ ಪ್ರೇಕ್ಷಕರ ಗುಂಪಿನಿಂದ ಬೈಗುಳಗಳು ಕೇಳಿಬಂದಿವೆ ಎನ್ನಲಾಗಿದೆ. ಪ್ರವಾಸಕ್ಕಾಗಿ ಆಸೀಸ್ ನೆಲಕ್ಕೆ ಕಾಲಿಟ್ಟ ಬೆನ್ನಲ್ಲೇ ತಂದೆಯ ಅಗಲಿಕೆಯ ಆಘಾತ ಎದುರಿಸಿದ್ದ ಸಿರಾಜ್, ಬೈಗುಳದಿಂದ ಹೆಚ್ಚಿನ ಬೇಸರಕ್ಕೆ ಒಳಗಾಗಿದ್ದಾರೆ.

    ರೌಡಿ ವರ್ತನೆ ಎಂದು ದೂರಿದ ಕೊಹ್ಲಿ
    ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಘಟನೆಯನ್ನು ಖಂಡಿಸಿದ್ದು, ‘ಜನಾಂಗೀಯ ನಿಂದನೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಬೌಂಡರಿ ಗೆರೆಯ ಬಳಿಕ ನಾನೂ ಹಲವು ಬಾರಿ ನಿಂದನೆಗಳನ್ನು ಎದುರಿಸಿದ್ದೇನೆ. ಇದು ನಿಜಕ್ಕೂ ರೌಡಿ ವರ್ತನೆ’ ಎಂದು ಟ್ವೀಟಿಸಿದ್ದಾರೆ. 4ನೇ ದಿನದಾಟದ ಬಳಿಕ ಮಾತನಾಡಿರುವ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್, ಸಿಡ್ನಿಯಲ್ಲಿ ನಿಂದನೆಗಳು ಎದುರಾಗುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ.

    ಪ್ರೇಕ್ಷಕನಿಂದ ಬುಮ್ರಾ, ಸಿರಾಜ್‌ಗೆ ಜನಾಂಗೀಯ ನಿಂದನೆ, ಭಾರತ ತಂಡ ದೂರು

    ಆಸ್ಪತ್ರೆಯ ಬೆಡ್‌ನಿಂದಲೇ ಐಪಿಎಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಸೌರವ್ ಗಂಗೂಲಿ!

    609 ದಿನಗಳ ಬಳಿಕ ಕಣಕ್ಕಿಳಿದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts