ಟೆಸ್ಟ್​ ಕ್ರಿಕೆಟ್​ ಶುರುವಾಯ್ತು, ಏಕದಿನ-ಟಿ20 ಯಾವಾಗ ಆರಂಭ ಗೊತ್ತೇ?

odi t20
Published on

ಬೆಂಗಳೂರು: ಆತಿಥೇಯ ಇಂಗ್ಲೆಂಡ್​ ಮತ್ತು ಪ್ರವಾಸಿ ವೆಸ್ಟ್​ ಇಂಡೀಸ್​ ತಂಡಗಳ ನಡುವಿನ ಸೌಥಾಂಪ್ಟನ್​ ಟೆಸ್ಟ್​ ಪಂದ್ಯದೊಂದಿಗೆ ಕ್ರಿಕೆಟ್​ನ ಸಾಂಪ್ರದಾಯಿಕ ಮಾದರಿಗೆ ಚಾಲನೆ ದೊರೆತಿದೆ. 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರಾರಂಭಗೊಂಡಿರುವುದಕ್ಕೆ ಕ್ರಿಕೆಟ್​ ಪ್ರೇಮಿಗಳೆಲ್ಲರೂ ಖುಷಿಪಡುತ್ತಿದ್ದಾರೆ. ಈ ನಡುವೆ ಕ್ರಿಕೆಟ್​ನ ರೋಚಕತೆ, ಮನರಂಜನೆಗಳಿಗೆ ವೇದಿಕೆಯಾಗುವ ಏಕದಿನ ಮತ್ತು ಟಿ20 ಪಂದ್ಯಗಳು ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಯೂ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಟೆಸ್ಟ್​ ಕ್ರಿಕೆಟ್​ ಪುನರಾರಂಭಕ್ಕೆ ವೇದಿಕೆಯಾಗಿರುವ ಕ್ರಿಕೆಟ್​ ಜನಕರ ನಾಡಿನಲ್ಲೇ ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳು ಕೂಡ ಮೊದಲಿಗೆ ಶುರುವಾಗಲಿವೆ. ವೆಸ್ಟ್​ ಇಂಡೀಸ್​ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಯ ಬಳಿಕ ಏಕದಿನ ವಿಶ್ವಕಪ್​ ಚಾಂಪಿಯನ್​ ಇಂಗ್ಲೆಂಡ್​ ತಂಡ ನೆರೆಯ ದೇಶ ಐರ್ಲೆಂಡ್​ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಮೂಲಕ ಕರೊನಾ ಹಾವಳಿಯ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಜುಲೈ 30ರಂದು ಸೌಥಾಂಪ್ಟನ್​ನ ಏಜಿಯಸ್​ ಬೌಲ್​ನಲ್ಲೇ ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಆಗಸ್ಟ್​ 1 ಮತ್ತು 4 ರಂದು ಮತ್ತೆರಡು ಏಕದಿನ ಪಂದ್ಯಗಳು ನಡೆಯಲಿವೆ. ಮಾರ್ಚ್​ 13ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಕೊನೆಯ ಏಕದಿನ ಪಂದ್ಯ ನಡೆದಿತ್ತು. ಸಿಡ್ನಿಯಲ್ಲಿ ಖಾಲಿ ಕ್ರೀಡಾಂಗಣದಲ್ಲೇ ಈ ಏಕದಿನ ಪಂದ್ಯ ನಡೆದಿತ್ತು.

ಇನ್ನು ಟಿ20 ಪಂದ್ಯದ ಪುನರಾರಂಭಕ್ಕೆ ಕ್ರಿಕೆಟ್​ ಪ್ರೇಮಿಗಳು ಆಗಸ್ಟ್​ ಅಂತ್ಯದವರೆಗೂ ಕಾಯಬೇಕಾಗಿದೆ. ಐರ್ಲೆಂಡ್​ ವಿರುದ್ಧದ ಏಕದಿನ ಸರಣಿಯ ಬಳಿಕ ಇಂಗ್ಲೆಂಡ್​ ತಂಡ ಪಾಕಿಸ್ತಾನ ವಿರುದ್ಧ ಮತ್ತೆ 3 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಬಳಿಕ ಆಗಸ್ಟ್​ 28ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಓಲ್ಡ್​ ಟ್ರಾಫೋರ್ಡ್​ನಲ್ಲಿ ಈ ಪಂದ್ಯಗಳು ನಡೆಯಲಿವೆ. ಕೊನೆಯದಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯ ಮಾರ್ಚ್​ 11ರಂದು ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಢಾಕಾದಲ್ಲಿ ನಡೆದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ:
ಇಂಗ್ಲೆಂಡ್​-ಐರ್ಲೆಂಡ್​ ಏಕದಿನ ಸರಣಿ:
*ಮೊದಲ ಏಕದಿನ: ಜುಲೈ 30: ಸೌಥಾಂಪ್ಟನ್​ (ಆರಂಭ: ಸಂಜೆ 6.30)
*2ನೇ ಏಕದಿನ: ಆಗಸ್ಟ್​ 1: ಸೌಥಾಂಪ್ಟನ್​ (ಆರಂಭ: ಸಂಜೆ 6.30)
*3ನೇ ಏಕದಿನ: ಆಗಸ್ಟ್​ 4: ಸೌಥಾಂಪ್ಟನ್​(ಆರಂಭ: ಸಂಜೆ 6.30)

ಇಂಗ್ಲೆಂಡ್​-ಪಾಕಿಸ್ತಾನ ಸರಣಿ:
*ಮೊದಲ ಟೆಸ್ಟ್​: ಆಗಸ್ಟ್​ 5-9: ಮ್ಯಾಂಚೆಸ್ಟರ್​ (ಆರಂಭ: ಮಧ್ಯಾಹ್ನ 3.30)
*2ನೇ ಟೆಸ್ಟ್​: ಆಗಸ್ಟ್​ 13-17: ಸೌಥಾಂಪ್ಟನ್​ (ಆರಂಭ: ಮಧ್ಯಾಹ್ನ 3.30)
*3ನೇ ಟೆಸ್ಟ್​: ಆಗಸ್ಟ್​ 21-25: ಸೌಥಾಂಪ್ಟನ್​ (ಆರಂಭ: ಮಧ್ಯಾಹ್ನ 3.30)
*ಮೊದಲ ಟಿ20: ಆಗಸ್ಟ್​ 28: ಮ್ಯಾಂಚೆಸ್ಟರ್​ (ಆರಂಭ: ರಾತ್ರಿ 10.30)
*2ನೇ ಟಿ20: ಆಗಸ್ಟ್​ 30: ಮ್ಯಾಂಚೆಸ್ಟರ್​ (ಆರಂಭ: ರಾತ್ರಿ 7.00)
*3ನೇ ಟಿ20: ಸೆಪ್ಟೆಂಬರ್​ 1: ಮ್ಯಾಂಚೆಸ್ಟರ್​ (ಆರಂಭ: ರಾತ್ರಿ 10.30)
ನೇರಪ್ರಸಾರ: ಸೋನಿ ಸಿಕ್ಸ್​, ಜಿಯೋ ಟಿವಿ
*ಸಮಯ: ಭಾರತೀಯ ಕಾಲಮಾನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net