

ಸೌಥಾಂಪ್ಟನ್: ಕರೊನಾ ಹಾವಳಿಯ ನಡುವೆ 117 ದಿನಗಳ ಬಳಿಕ ಶುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ದಿನ ಮಳೆಯಿಂದಾಗಿ ಕೇವಲ 106 ಎಸೆತಗಳ ಆಟ ನಡೆದಿದ್ದರೆ, 2ನೇ ದಿನ ಮಳೆ ಅಡಚಣೆ ಇಲ್ಲದೆ ಸರಾಗ ಆಟ ಮುಂದುವರಿದಿದೆ. ವೆಸ್ಟ್ ಇಂಡೀಸ್ ತಂಡದ ವೇಗಿಗಳು ಗುರುವಾರ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಕಡಿವಾಣ ಹಾಕಿದ್ದು, ಭೋಜನ ವಿರಾಮದ ಬಳಿಕ ಆಟ ಮುಂದುವರಿಸಿದ ಇಂಗ್ಲೆಂಡ್ 204 ರನ್ಗೆ ಆಲೌಟ್ ಆಗಿದೆ. ಪ್ರೇಕ್ಷಕರಿಲ್ಲದೆ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಪಂದ್ಯ ನಡೆಯುತ್ತಿದೆ.
1 ವಿಕೆಟ್ಗೆ 35 ರನ್ಗಳಿಂದ 2ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್ಗೆ ವೇಗಿಗಳಾದ ಶನನ್ ಗ್ಯಾಬ್ರಿಯೆಲ್ ಮತ್ತು ನಾಯಕ ಜೇಸನ್ ಹೋಲ್ಡರ್ ಕಡಿವಾಣ ಹಾಕಿದರು. ಕರೊನಾ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧಿಸಿರುವ ನಡುವೆಯೂ ವೇಗಿಗಳು ಸ್ಪರ್ಧಾತ್ಮಕ ಪಿಚ್ನ ಲಾಭವೆತ್ತಿದ್ದಾರೆ. ಜೇಸನ್ ಹೋಲ್ಡರ್ 5 ವಿಕೆಟ್ ಗೊಂಚಲು ಪಡೆದು ಆಂಗ್ಲರಿಗೆ ನಿಯಂತ್ರಣ ಹೇರಿದರು.
ಭೋಜನ ವಿರಾಮದ ವೇಳೆ ಮಳೆ ಸುರಿದ ಕಾರಣ ಬಳಿಕ ಒದ್ದೆ ಮೈದಾನದಿಂದಾಗಿ ಆಟಕ್ಕೆ ಮತ್ತೆ ಅಡಚಣೆಯಾಯಿತು. ಬಳಿಕ ಹೋಲ್ಡರ್ ದಾಳಿಗೆ ಕುಸಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಕೆಲಕಾಲ ಆಸರೆಯಾಗಿದ್ದರು.
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 67.3 ಓವರ್ಗಳಲ್ಲಿ 204 (ಬರ್ನ್ಸ್ 30, ಡೆನ್ಲಿ 18, ಕ್ರೌಲಿ 10, ಬೆನ್ ಸ್ಟೋಕ್ಸ್ 43, ಪೋಪ್ 12, ಬಟ್ಲರ್ 35, ಡೊಮಿನಿಕ್ ಬೆಸ್ 31*, ಶನನ್ ಗ್ಯಾಬ್ರಿಯೆಲ್ 62ಕ್ಕೆ 4, ಹೋಲ್ಡರ್ 42ಕ್ಕೆ 6).