

ಲಂಡನ್: ಗ್ಲಾಮರಸ್ ಲುಕ್ನಿಂದ ಟೆನಿಸ್ ಕೋರ್ಟ್ನಲ್ಲಿ ಗಮನ ಸೆಳೆಯುತ್ತಿದ್ದ ಕೆನಡದ ಆಟಗಾರ್ತಿ ಎಗುನಿ ಬೌಚಾರ್ಡ್, ಇತ್ತೀಚೆಗೆ ಅಭಿಮಾನಿಗಳ ಜತೆಗೆ ಡೇಟಿಂಗ್ಗೆ ಹೋಗುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ಅಭಿಮಾನಿಗಳಿಂದಲೇ ಅವರು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಆರ್ಥಿಕ ಸಂಕಷ್ಟದಲ್ಲಿದ್ದ ಅಭಿಮಾನಿಯೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಬೌಚಾರ್ಡ್ ಗಮನಸೆಳೆದಿರುವುದು ವಿಶೇಷವಾಗಿದೆ.
ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಬೌಚಾರ್ಡ್ ಅವರ ಅಭಿಮಾನಿ ಮಾರ್ಗನ್ ಜೇಮಿ, ಕೆನಡದ ಕೋಕ್ ಕಂಪನಿ ಕೆಲ ವರ್ಷಗಳ ಹಿಂದೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದಿದ್ದ ಟಿ-ಶರ್ಟ್, ಕ್ಯಾಪ್ ಮತ್ತು ಪೋಸ್ಟ್ ಕಾರ್ಡ್ ಹರಾಜಿಗೆ ಇಡುವ ನಿರ್ಧಾರ ಪ್ರಕಟಿಸಿದ್ದರು. ಈ ಮೂಲಕ ಅವರು ತಮ್ಮ ಶ್ರವಣ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಯಸಿದ್ದರು. ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ 2014ರ ವಿಂಬಲ್ಡನ್ ರನ್ನರ್ಅಪ್ ಬೌಚಾರ್ಡ್, 'ದಯವಿಟ್ಟು ಆ ಸ್ಮರಣಿಕೆಗಳನ್ನು ಮಾರಾಟ ಮಾಡಬೇಡಿ, ನಿಮ್ಮ ಚಿಕಿತ್ಸೆಯ ವೆಚ್ಚವನ್ನು ನಾನೇ ಭರಿಸುತ್ತೇನೆ' ಎಂದು ಟ್ವೀಟಿಸಿದ್ದಾರೆ.
26 ವರ್ಷದ ಆಟಗಾರ್ತಿ ಬೌಚಾರ್ಡ್ರ ವಿಶಾಲ ಹೃದಯದ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಇತರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಮಾಜಿ ವಿಶ್ವ ನಂ. 5 ಆಟಗಾರ್ತಿ ಬೌಚಾರ್ಡ್ ಇದೇ ವೇಳೆ ಮತ್ತೊಂದು ಟ್ವೀಟ್ನಲ್ಲಿ ತಮ್ಮ ಹಸ್ತಾಕ್ಷರದ ಹಿಂದಿನ ಗುಟ್ಟನ್ನು ಬಹಿರಂಗಪಡಿಸಿದ್ದು, 9ನೇ ವಯಸ್ಸಿನಲ್ಲೇ ಹಸ್ತಾಕ್ಷರ ಹಾಕುವುದನ್ನು ಅಭ್ಯಾಸ ಮಾಡಿದ್ದೆ ಎಂದಿದ್ದಾರೆ. ನಾನು ಜನಪ್ರಿಯ ವ್ಯಕ್ತಿಯಾದರೆ ಹೇಗೆ ಹಸ್ತಾಕ್ಷರ ನೀಡುವುದೆಂದು 9ನೇ ವಯಸ್ಸಿನಲ್ಲೇ ಅಭ್ಯಾಸ ಮಾಡಿದ್ದೆ. ಅದೇ ಹಸ್ತಾಕ್ಷರವನ್ನು ಈಗಲೂ ಹಾಕುತ್ತಿರುವೆ. ಅದನ್ನು ಬದಲಾಯಿಸಿಲ್ಲ ಎಂದು ತಿಳಿಸಿದ್ದಾರೆ.