ಪಾಕಿಸ್ತಾನ ಕ್ರಿಕೆಟ್​ನಲ್ಲಿ ಯಾವುದು ಸರಿಯಿಲ್ಲ ಅನ್ನೋದಕ್ಕೆ ಇದು ಕೂಡ ಒಂದು ಬಲವಾದ ಸಾಕ್ಷಿ! PCB

pcb
Published on

ರಾವಲ್​ಪಿಂಡಿ: ಪಾಕಿಸ್ತಾನ ಕ್ರಿಕೆಟ್​ನಲ್ಲಿ (Pakistan Cricket) ಸದ್ಯ ಯಾವುದು ಸರಿಯಿಲ್ಲ ಅನ್ನೋದು ಕಳೆದ ಒಂದೆರೆಡು ತಿಂಗಳಿನಿಂದ ಒಂದಲ್ಲ ಒಂದು ಸುದ್ದಿಯಿಂದ ಸ್ಪಷ್ಟವಾಗುತ್ತಲೇ ಇದೆ. ಬಾಬರ್​ ಆಜಂ ನಾಯಕತ್ವದಲ್ಲಿ ಹೀನಾಯ ಸೋಲು ಕಂಡ ಪಾಕ್​ ತಂಡ, ಇದೀಗ ಕೇವಲ ಟಿ20 ಮಾತ್ರವಲ್ಲದೇ ಏಕದಿನ, ಟೆಸ್ಟ್​ ಫಾರ್ಮೆಟ್​ಗಳನ್ನು ವಶಪಡಿಸಿಕೊಳ್ಳುವಲ್ಲಿಯೂ ಸಹ ವಿಫಲವಾಗಿದೆ. ಸದ್ಯ ಈ ಎಲ್ಲಾ ವಿಷಯಗಳಿಂದ ತತ್ತರಿಸಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB)​, ಇತ್ತೀಚೆಗಷ್ಟೇ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಹಿರಿಯ ಕ್ರಿಕೆಟಿಗ ಮೊಹಮ್ಮದ್​ ಯೂಸಫ್​ ನೀಡಿದ ರಾಜೀನಾಮೆಯಿಂದ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಲ್ಲಿ ಪಿಸಿಬಿಯ ಆಡಳಿತ ಸರಿಯಿಲ್ಲವೋ ಅಥವಾ ಆಟಗಾರರ ಶ್ರಮದಲ್ಲಿ ಕೊರತೆಯಿದೆಯೋ ಎಂಬುದು ಸದ್ಯದ ಮಟ್ಟಿಗೆ ಅಸ್ಪಷ್ಟವಾಗಿಯೇ ಉಳಿದಿದೆ.

ಶಾಕಿಂಗ್ ವಿಚಾರ

ಕಳೆದ ತಿಂಗಳು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಲ್ಲಿ ಒಗ್ಗಟ್ಟಿಲ್ಲ ಎಂದು ದೂರಿದ್ದ ಕೋಚ್ ಗ್ಯಾರಿ ಕರ್ಸ್ಟನ್​, ಆಟಗಾರರ ನಡೆಯಿಂದ ತೀರ ಬೇಸತ್ತು, ವೈಟ್​ ಬಾಲ್​ ಹೆಡ್​ ಕೋಚ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇದರ ಬೆನ್ನಲ್ಲೇ ಪಿಸಿಬಿ, ಕೋಚ್ ಜವಾಬ್ದಾರಿಯನ್ನು ಜೇಸನ್ ಗಿಲ್ಲೆಸ್ಪಿ ಅವರಿಗೆ ಹಸ್ತಾಂತರಿಸಿತು. ಆದರೆ, ಇದೀಗ ಇಲ್ಲಿಯೂ ಒಂದು ದೊಡ್ಡ ಸಮಸ್ಯೆ ಕಾಡಲಾರಂಭಿಸಿದ್ದು, ಪಾಕ್​ ಮಾಜಿ ವೇಗಿ ತನ್ವಿರ್ ಅಹ್ಮದ್​ ಶಾಕಿಂಗ್ ವಿಚಾರವೊಂದನ್ನು ಬಟಾಬಯಲು ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹೊಸ ತಲೆ ನೋವು ನೀಡಿದ್ದಾರೆ.

ವ್ಯವಸ್ಥೆಯಲ್ಲಿ ಭ್ರಷ್ಟಾವಾರವೇ ತುಂಬಿದೆ

"ವೈಟ್ ಬಾಲ್ ತಂಡಗಳಿಗೆ ತರಬೇತಿ ನೀಡುವ ಹೆಚ್ಚುವರಿ ಜವಾಬ್ದಾರಿಯನ್ನು ಹೊತ್ತಿರುವ ಜೇಸನ್ ಗಿಲ್ಲೆಸ್ಪಿ ಕೂಡ ಶೀಘ್ರದಲ್ಲೇ ರಾಜೀನಾಮೆ ಘೋಷಿಸಲಿದ್ದಾರೆ. ಜೇಸನ್ ಅವರನ್ನು ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಕರೆತರಲಾಗಿತ್ತು. ಆದರೆ, ಗ್ಯಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಅವರ ಜವಾಬ್ದಾರಿಯನ್ನು ಇವರಿಗೆ ಕೊಡಲಾಯಿತು. ಪಿಸಿಬಿ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾವಾರವೇ ತುಂಬಿರುವ ಕಾರಣ, ಅಂದು ಅವರು ಹೋದರು, ನಾಳೆ ಇವರು ಹೋಗುತ್ತಾರೆ. ಇದರಲ್ಲಿ ಯಾವುದೇ ಆಶ್ಚರ್ಯ ಬೇಡ" ಎಂದು ಪಾಕ್ ಕ್ರಿಕೆಟ್ ಬೋರ್ಡ್​ ವಿರುದ್ಧ ಗಂಭೀರ ಆರೋಪ ಎಸಗಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net