ಆರ್​ಸಿಬಿ ಪಾಲಿಗೆ ಇದು ಮರುಕಳಿಸಿದರೆ ಪ್ಲೇಆಫ್​ ಅಲ್ಲ ಫೈನಲ್​ ಪ್ರವೇಶ ಗ್ಯಾರಂಟಿ!

RCB (1)
Published on

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಸತತ 5 ಗೆಲುವಿನೊಂದಿಗೆ ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಪ್ಲೇಆಫ್​ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಈ ಸೀಸನ್​ನ ಆರಂಭದಲ್ಲಿ ಸತತ ಸೋಲುಗಳಿಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಫಾಫ್​ ಡುಪ್ಲೆಸಿಸ್ ಪಡೆ, ದ್ವಿತೀಯಾರ್ಧದಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. ಆ ತಂಡ ಅಥವಾ ಈ ತಂಡ ಅಂತಾನೂ ನೋಡದೆ ಎದುರಾಳಿಗಳನ್ನು ಮಣ್ಣು ಮುಕ್ಕಿಸಿದೆ.

ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರಿ ಅಂತರದಲ್ಲಿ ಗೆದ್ದರೆ ಆರ್​ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಆದರೆ, ಬಲಿಷ್ಠ ಸಿಎಸ್‌ಕೆಯನ್ನು ಸೋಲಿಸುವ ಮೂಲಕ ಆರ್‌ಸಿಬಿ ಪ್ಲೇಆಫ್ ತಲುಪುತ್ತದೆಯೇ? ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ, ಆರ್​ಸಿಬಿ ಪಾಲಿಗೆ ಈ ಇತಿಹಾಸ ಮರುಕಳಿಸಿದರೆ, ಪ್ಲೇಆಫ್​ ಅಲ್ಲ ಫೈನಲ್​ ಪ್ರವೇಶವೂ ಗ್ಯಾರಂಟಿ ಎನ್ನುತ್ತಿದ್ದಾರೆ ಕ್ರೀಡಾಭಿಮಾನಿಗಳು.

ಆರ್​ಸಿಬಿ ಪ್ಲೇಆಫ್​ ಪ್ರವೇಶ ಪಡೆಯಬೇಕಾದ್ರೆ ಭಾರಿ ಪವಾಡವೇ ನಡೆಯಬೇಕು ಅಂತಹುದರಲ್ಲಿ ಫೈನಲ್​ ತಲುಪಲು ಸಾಧ್ಯವೇ ಎನ್ನುವ ಚರ್ಚೆಯೂ ನಡೆಯುತ್ತಿದೆ. ಆದರೆ, ಇದು ಸಾಧ್ಯ ಎನ್ನುತ್ತಿದೆ ಇತಿಹಾಸ. ಬೆಂಗಳೂರಿಗರಲ್ಲಿರುವ ಈ ಒಂದು ಭಾವನೆ ಸಮಾಧಾನ ತಂದಿದೆ. ಅಲ್ಲದೆ, ಈ ಬಾರಿ ಫೈನಲ್‌ಗೆ ಹೋಗಬಹುದು ಎಂಬ ವಿಶ್ವಾಸವನ್ನೂ ಹೆಚ್ಚಿಸಿದೆ.

2009, 2011 ಮತ್ತು 2016ರ ಐಪಿಎಲ್ ಸೀಸನ್‌ಗಳಲ್ಲಿ ಆರ್‌ಸಿಬಿ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಈ ಮೂರು ಸೀಸನ್​ಗಳಲ್ಲಿ ಕೆಲ ಹಂತದಲ್ಲಿ ಆರ್​ಸಿಬಿ ಬ್ಯಾಕ್ ಟು ಬ್ಯಾಕ್ ಐದು ವಿಜಯಗಳನ್ನು ಗಳಿಸಿತು. ಎಲ್ಲ ಮೂರು ಸೀಸನ್​ಗಳಲ್ಲಿಯೂ ಬೆಂಗಳೂರು ತಂಡ ಫೈನಲ್‌ಗೆ ಅರ್ಹತೆ ಗಳಿಸಿತು. ಫೈನಲ್‌ನಲ್ಲಿ ಗೆಲ್ಲದಿರುವುದು ಬೇರೆ ವಿಷಯವೇ ಆಗಿರಬಹುದು. ಆದರೆ, ಫೈನಲ್​ ಪ್ರವೇಶಿಸಿದ ತೃಪ್ತಿ ಅಂತೂ ಇದ್ದೇ ಇದೆ. ಈ ಬಾರಿಯೂ ಅದು ಪುನರಾವರ್ತನೆಯಾಗಬಹುದು ಎನ್ನುತ್ತಿದ್ದಾರೆ ಕ್ರೀಡಾಭಿಮಾನಿಗಳು.

ಐಪಿಎಲ್​-2024ರ ಮೊದಲಾರ್ಧದಲ್ಲಿ RCB ಸತತ ಆರು ಪಂದ್ಯಗಳನ್ನು ಕಳೆದುಕೊಂಡು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಆದರೆ, ದ್ವಿತೀಯಾರ್ಧದಲ್ಲಿ ಪುಟಿದೆದ್ದ ಆರ್​ಸಿಬಿ ಒಂದರ ಹಿಂದೆ ಒಂದರಂತೆ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ 2009, 2011 ಮತ್ತು 2016ರ ಇತಿಹಾಸ ಮರುಕುಳಿಸುತ್ತದೆ ಎಂಬ ಭಾವನೆ ಆರ್​ಸಿಬಿ ಅಭಿಮಾನಿಗಳಲ್ಲಿದೆ.

ಒಂದು ವೇಳೆ ಇದು ಮರುಕಳಿಹಿಸಿದರೆ ಪ್ಲೇಆಫ್ ಅಲ್ಲ, ಡುಪ್ಲೆಸಿಸ್​ ಪಡೆ ಫೈನಲ್‌ ತಲುಪುವುದು ಖಚಿತ. ಈ ಒ0ದು ಸೆಂಟಿಮೆಂಟ್ ಆರ್​ಸಿಬಿ ಪಾಲಿಗೆ ವರ್ಕ್ ಔಟ್ ಆಗಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net