ಯಾರಾದ್ರೂ ಕೊಹ್ಲಿಯನ್ನು ಕೆಣಕಿದ್ರೆ… ಟೀಕಾಕಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಆಸಿಸ್​ ಲೆಜೆಂಡರಿ ಕ್ರಿಕೆಟಿಗ!

ViratKohli
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ಮತ್ತು ಆರ್‌ಸಿಬಿಯ ಆಧಾರ ಸ್ತಂಭ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ರನ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಸೀಸನ್​ನಲ್ಲಿ ಕೊಹ್ಲಿ ಅವರು ಆಡಿದ 12 ಪಂದ್ಯಗಳಲ್ಲಿ 634 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿ ಮುಂದುವರಿದಿದ್ದಾರೆ. ಆದರೂ, ಕೊಹ್ಲಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.

ಎಲ್ಲರಿಗಿಂತ ಉತ್ತಮವಾಗಿ ಆಡುತ್ತಿದ್ದರೂ ಕೊಹ್ಲಿಯಿಂದಾಗಿಯೇ ಆರ್​ಸಿಬಿ ಸೋತಿತು ಎಂದು ಮಾಜಿ ಆಟಗಾರರು ಹಾಗೂ ಕೆಲ ನೆಟ್ಟಿಗರು ಟೀಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ನಿಧಾನಗತಿಯ ಬ್ಯಾಟಿಂಗ್ ಮತ್ತು ಕಡಿಮೆ ಸ್ಟ್ರೈಕ್ ರೇಟ್‌ಗಾಗಿ ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ. ಆದರೆ, ರನ್ ಮಷಿನ್ ಕೊಹ್ಲಿ ತನ್ನ ವಿರುದ್ಧದ ಎಲ್ಲ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಇದರ ನಡುವೆ ಕೊಹ್ಲಿಯನ್ನು ಟೀಕಿಸಿದ್ದಲ್ಲಿ ಆತ ಮತ್ತಷ್ಟು ಅಪಾಯಕಾರಿಯಾಗುತ್ತಾರೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

Matthew Hayden
ನಿನ್ನೆ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಮ್ಯಾಥ್ಯೂ ಹೇಡನ್, ಕೊಹ್ಲಿ ಹಾಗೂ ಅವರ ಆಟದ ಶೈಲಿಯ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಖಡಕ್​ ಉತ್ತರ ನೀಡಿದರು. ಕಳೆದ ಕೆಲವು ದಿನಗಳಿಂದ ಕೊಹ್ಲಿ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳನ್ನು ನಿರ್ಲಕ್ಷಿಸಲಾಗದು. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಶ್ರೇಷ್ಠ ಆಟಗಾರನಾಗುವುದು ಸಣ್ಣ ಸಾಧನೆಯಲ್ಲ. ಇದಲ್ಲದೆ, ಕೊಹ್ಲಿ ತಾಂತ್ರಿಕವಾಗಿ ಅತ್ಯುತ್ತಮ ಆಟಗಾರ. ಪಂದ್ಯ ಗೆಲ್ಲುವವರೆಗೂ ಹೋರಾಡುವ ಸಾಮರ್ಥ್ಯ ಕೊಹ್ಲಿಗಿದೆ. ನಾನು ಅದನ್ನು ಹಲವು ಪಂದ್ಯಗಳಲ್ಲಿ ನೋಡಿದ್ದೇನೆ. ಅಂತಹ ಆಟಗಾರನನ್ನು ನೀವು ಟೀಕಿಸಿದರೆ, ಅವರು ತಮ್ಮ ಬ್ಯಾಟ್‌ನಿಂದಲೇ ಉತ್ತರಿಸುತ್ತಾರೆ. ಮೇಲಾಗಿ, ನೀವು ಕೊಹ್ಲಿಯನ್ನು ಕೆಣಕಿದರೆ, ಅವರು ಇನ್ನಷ್ಟು ಅಪಾಯಕಾರಿಯಾಗುತ್ತಾರೆ ಎಂದು ಕಿಂಗ್ ಕೊಹ್ಲಿಯನ್ನು ಟೀಕಿಸುವವರಿಗೆ ಮ್ಯಾಥ್ಯೂ ಹೇಡನ್ ಎಚ್ಚರಿಕೆ ಕೊಟ್ಟರು.

ಅಂದಹಾಗೆ ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅದ್ಭುತವಾಗಿದ್ದು, ಸ್ಪಿನ್​ ಬೌಲಿಂಗ್​ ಎದುರಿಸವಾಗ ಸುಧಾರಿಸಿಕೊಳ್ಳಬೇಕೆಂದು ಹೇಡನ್ ಸಲಹೆ ನೀಡಿದ್ದಾರೆ. ಸ್ಪಿನ್‌ನಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ 138 ಇದೆ ಎಂದು ನೆನಪಿಸಿದ ಹೇಡನ್​, ಮುಂಬರುವ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಪವರ್ ಪ್ಲೇನಲ್ಲಿ ಕಟ್ಟಿಹಾಕಲು ಸ್ಪಿನ್ನರ್‌ಗಳನ್ನು ಬಳಸುವ ಸಾಧ್ಯತೆಗಳಿವೆ ಎಂದು ಸುಳಿವು ನೀಡಿದರು. ಆದ್ದರಿಂದಲೇ ಎದುರಾಳಿ ವಿರುದ್ಧ ಆಕ್ರಮಣಕಾರಿ ಮನೋಭಾವ ಹೆಚ್ಚಿಸಿಕೊಳ್ಳಬೇಕು ಮತ್ತು ಸ್ಪಿನ್ ಬೌಲಿಂಗ್​ನಲ್ಲೂ ವಿರಾಟ್ ವೇಗವಾಗಿ ಆಡಬೇಕು ಎಂದು ಹೇಡನ್ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net