

ಬೆಂಗಳೂರು: ನಿನ್ನೆ (ಮೇ 12) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 47 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ ಆಫ್ ಭರವಸೆಯನ್ನು ಆರ್‌ಸಿಬಿ ಜೀವಂತವಾಗಿ ಇರಿಸಿಕೊಂಡಿದೆ. ಈ ಸೀಸನ್ನಲ್ಲಿ ಸತತ ಐದು ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅದ್ಭುತ ಗೆಲುವಿನ ನಂತರ ಆರ್‌ಸಿಬಿ ನಾಯಕ ಫಾಪ್ ಡುಪ್ಲೆಸಿಸ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಆ ಓರ್ವ ಆಟಗಾರ ತಂಡಕ್ಕೆ ಸೇರಿದ ಬಳಿಕ ಆರ್‌ಸಿಬಿ ಆಟದ ಶೈಲಿಯೇ ಬದಲಾಗಿದೆ ಎಂದು ಡುಪ್ಲೆಸಿಸ್ ಹೇಳಿದರು. ಹಾಗಾದರೆ ಆ ಆರ್‌ಸಿಬಿ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವು ನಮಗೆ ಅದ್ಭುತವಾಗಿದೆ. ಇದು ನಮಗೆ ಸಂತೋಷವನ್ನು ನೀಡಿದೆ. ಆದರೆ, ಮೊದಲಾರ್ಧದಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ದಯನೀಯವಾಗಿ ವಿಫಲರಾದೆವು. ಆದರೆ ಒಬ್ಬ ಆಟಗಾರನ ಆಗಮನದಿಂದ ನಮ್ಮ ತಂಡದ ಪ್ರದರ್ಶನ ಸಂಪೂರ್ಣ ಬದಲಾಯಿತು. ಅವರೇ ಸ್ವಪ್ನಿಲ್ ಸಿಂಗ್. ಸ್ವಪ್ನಿಲ್ ಆಗಮನದಿಂದ ನಮ್ಮ ಬೌಲಿಂಗ್ ಶಕ್ತಿ ಹೆಚ್ಚಿದೆ. ಅವರ ಸ್ಪಿನ್ ತಂಡಕ್ಕೆ ತುಂಬಾ ಉಪಯುಕ್ತವಾಗಿದೆ. ಸ್ವಪ್ನಿಲ್ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಡುಪ್ಲೆಸಿಸ್ ಹೊಗಳಿದರು.
ಇದೇ ಸಂದರ್ಭದಲ್ಲಿ ಕಳೆದ ಎರಡ್ಮೂರು ಪಂದ್ಯಗಳಲ್ಲಿ ಯಶ್ ದಯಾಳ್ ಮತ್ತು ಲಾಕಿ ಫರ್ಗ್ಯೂಸನ್ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಡುಪ್ಲೆಸಿಸ್ ಹೇಳಿದರು.
ಅಂದಹಾಗೆ 33 ವರ್ಷದ ಸ್ವಪ್ನಿಲ್ ಸಿಂಗ್ ಈ ಸೀಸನ್ನ ಮಧ್ಯದಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡರು. ಈವರೆಗೂ ಐದು ಪಂದ್ಯಗಳನ್ನಾಡಿದ್ದು, 6 ವಿಕೆಟ್ಗಳನ್ನು ಪಡೆದಿದ್ದಾರೆ. ಸ್ವಪ್ನಿಲ್ ಸಿಂಗ್ ಆಗಮನದಿಂದ ಆರ್‌ಸಿಬಿ ಆಟದ ಶೈಲಿ ಬದಲಾಗಿದೆ ಎಂಬ ಡುಪ್ಲೆಸಿಸ್ ಅವರ ಕಾಮೆಂಟ್‌ಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾನುವಾರ ಸಂಜೆ ಉದ್ಯಾನನಗರಿಯಲ್ಲಿ ತುಂತುರು ಮಳೆ ಸುರಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾತ್ರಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ಮಳೆ ಹರಿಸಿ ಸತತ 5ನೇ ಗೆಲುವಿನ ಸಂಭ್ರಮ ಕಂಡಿದೆ. ರಜತ್ ಪಾಟೀದಾರ್ (52 ರನ್, 32 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕದಾಸರೆ ಮತ್ತು ಸಂಘಟಿತ ಬೌಲಿಂಗ್ ಬಲದಿಂದ ಆರ್‌ಸಿಬಿ ತಂಡ ಐಪಿಎಲ್-17ರ ತನ್ನ 13ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 47 ರನ್ಗಳಿಂದ ಗೆಲುವು ಸಾಧಿಸಿದೆ.
ಮಾಡು ಇಲ್ಲವೆ ಮಡಿ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್‌ಸಿಬಿ, 9 ವಿಕೆಟ್ಗೆ 187 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪವರ್ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು ಚೇಸಿಂಗ್ನಲ್ಲಿ ಲಯ ತಪ್ಪಿದ ಡೆಲ್ಲಿ, ಹಂಗಾಮಿ ನಾಯಕ ಅಕ್ಷರ್ ಪಟೇಲ್ (57 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಹೋರಾಟದ ಹೊರತಾಗಿಯೂ 19.1 ಓವರ್ಗಳಲ್ಲಿ 140 ರನ್ಗಳಿಗೆ ಸರ್ವಪತನ ಕಂಡಿತು. ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದ ಆರ್‌ಸಿಬಿ, ನಂತರ ಸತತ 5 ಜಯ ಸಾಧಿಸಿ ಪುಟಿದೇಳುವ ಮೂಲಕ ಅಭಿಮಾನಿಗಳಿಗೆ ಪುಳಕ ನೀಡಿದೆ. (ಏಜೆನ್ಸೀಸ್)