ರೋಹಿತ್ ಅಥವಾ ಕೊಹ್ಲಿ ಅಲ್ಲ: ಬಾಬರ್​ ಅಜಮ್​​ ಪ್ರಕಾರ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್ ಈತ!​

Babar Azam
Published on

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್​ ದಂತಕಥೆ ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ವೃತ್ತಿಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಬ್ಯಾಟರ್ ಎಂದು ಕೊಂಡಾಡಿದ್ದಾರೆ.

ಇತ್ತೀಚೆಗೆ ಡಿವಿಲಿಯರ್ಸ್​ ಅವರ ಅಧಿಕೃತ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಬಾಬರ್​ ಈ ಮಾತುಗಳನ್ನು ಆಡಿದ್ದಾರೆ. ನಿಮ್ಮ ಪ್ರಕಾರ ಅತ್ಯುತ್ತಮ ಬ್ಯಾಟರ್​ ಯಾರು ಎಂಬುದನ್ನು ಆಯ್ಕೆ ಮಾಡಲು ಡಿವಿಲಿಯರ್ಸ್​ ಕೇಳಿದರು. ಈ ವೇಳೆ ತಕ್ಷಣ ಉತ್ತರಿಸಿದ ಬಾಬರ್​, ಸಕ್ರಿಯ ಕ್ರಿಕೆಟಿಗರಿಗಿಂತ ನಿವೃತ್ತಿ ಘೋಷಣೆ ಮಾಡಿರುವ ಡಿವಿಲಿಯರ್ಸ್​ ಹೆಸರು ತೆಗೆದುಕೊಂಡರು. ತಮ್ಮ ಹೆಸರನ್ನು ಕೇಳಿ ಡಿವಿಲಿಯರ್ಸ್​ ಒಂದು ಕ್ಷಣ ನಗೆಗಡಲಲ್ಲಿ ತೇಲಿದರು. ನನ್ನನ್ನು ಬಿಟ್ಟು ಬೇರೊಬ್ಬರನ್ನು ಆಯ್ಕೆ ಮಾಡುವಂತೆ ಕೇಳಿದಾಗ ನನ್ನ ಆಯ್ಕೆ ಒಂದೇ ಆದು ಎಬಿ ಡಿವಿಲಿಯರ್ಸ್​ ಎಂದು ಬಾಬು ಮರು ಉತ್ತರಿಸಿದರು.

ಇದೇ ಸಂದರ್ಭದಲ್ಲಿ ತನ್ನ ವೃತ್ತಿ ಜೀವನದಲ್ಲಿ ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂಬುದನ್ನು ಬಾಬರ್​ ಬಹಿರಂಗಪಡಿಸಿದರು. ಅವರ ಪ್ರಕಾರ ಆಸ್ಟ್ರೇಲಿಯಾ ವೇಗಿ ಪ್ಯಾಟ್​ ಕಮಿನ್ಸ್​ ಬೌಲಿಂಗ್​ ಎದುರಿಸುವುದು ಕಷ್ಟ ಎಂದರು.

ಫೋನ್​ಬುಕ್​ನಲ್ಲಿರುವ ಪ್ರಖ್ಯಾತ ವ್ಯಕ್ತಿ ಯಾರು ಎಂದು ಡಿವಿಲಿಯರ್ಸ್​ ಪ್ರಶ್ನಿಸಿದರು. ಅಲ್ಲದೆ, ಈ ಬಾರಿಯೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ಎಂದು ನಗೆಚಟಾಕಿ ಹಾರಿಸಿದರು. ಈ ವೇಳೆ ಮುಗುಳ್ನಕ್ಕ ಬಾಬರ್​, ಫೋನ್​ಬುಕ್​ನಲ್ಲಿ ಪಾಕಿಸ್ತಾನಿ ಸಿಂಗರ್​ ಅತಿಫ್​ ಅಸ್ಲಾಂ ಹೆಸರಿದೆ ಎಂದರು.

ಗ್ಲೋಬಲ್ ಟಿ20 ಕ್ರಿಕೆಟ್​ನಲ್ಲಿ ಭಾಗವಹಿಸಲು ಎನ್​ಒಸಿ ಕೋರಿ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯನ್ನು ವಿನಂತಿಸಿದ್ದರು. ಆದರೆ, ಮುಂಬರುವ ದಿನಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ಮತ್ತು ಮುಂದಿನ ವರ್ಷದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿವೆ. ಆಗಸ್ಟ್ 2024 ರಿಂದ ಮಾರ್ಚ್ 2025 ರ ಅವಧಿಯಲ್ಲಿ ಪಾಕಿಸ್ತಾನ ಸರಣಿ ಪಂದ್ಯಗಳನ್ನು ಎದುರಿಸುವುದರಿಂದ ರಾಷ್ಟ್ರೀಯ ಆಯ್ಕೆ ಸಮಿತಿಯೊಂದಿಗೆ ಸಮಾಲೋಚಿಸಿ, ಈ ಮೂವರು ಆಟಗಾರರಿಗೆ ಎನ್​ಒಸಿ ನೀಡುವುದನ್ನು ನಿರಾಕರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net