

ನವದೆಹಲಿ: ಇತ್ತಿಚೆಗಷ್ಟೇ ವೆಸ್ಟ್ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಟೀಮ್ ಇಂಡಿಯಾ, ಅದೇ ವೇಗದಲ್ಲಿ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿತು. ಆದರೆ, ಅದೇ ಬಲವನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತೋರಿಸಲು ಸಾಧ್ಯವಾಗಲಿಲ್ಲ.
ಮೂರು ಏಕದಿನ ಸರಣಿಯನ್ನು 2-0 ಅಂತರದಲ್ಲಿ ಭಾರತ ತಂಡ ಕಳೆದುಕೊಂಡಿತು. ಇದೇ ವೇಳೆ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಹಲವು ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ತಂಡದಲ್ಲಿ ಎಷ್ಟೋ ಶ್ರೇಷ್ಠ ಆಟಗಾರರಿದ್ದಾರೆ ಆದರೆ, ನಾಯಕ ರೋಹಿತ್ ಶರ್ಮ ಬೆಸ್ಟ್ ಎಂದು ಹೊಗಳಿದ್ದಾರೆ.
ರೋಹಿತ್ ಶರ್ಮಾ ಹೆಚ್ಚು ಒಳಗೊಳ್ಳುವ ನೀತಿಯನ್ನು ಹೊಂದಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿನ ಶಾಂತ ವಾತಾವರಣಕ್ಕೆ ಅವರು ಮುಖ್ಯ ಕಾರಣ. ರೋಹಿತ್ ಜತೆ ಕೆಲಸ ಮಾಡುವುದನ್ನು ನಾನು ಗೌರವವೆಂದು ಪರಿಗಣಿಸುತ್ತೇನೆ. ಟಿ20 ವಿಶ್ವಕಪ್ ಗೆಲ್ಲಲು ನನ್ನೊಂದಿಗೆ ಹಿರಿಯರು ತುಂಬಾ ಶ್ರಮಿಸಿದರು. ಈ ಯಶಸ್ಸು ಎಲ್ಲರ ಶ್ರಮ. ರೋಹಿತ್ ಅದ್ಭುತ ನಾಯಕ ಮತ್ತು ನಾನು ಅವರನ್ನು ಎರಡೂವರೆ ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ. ಎಲ್ಲ ಆಟಗಾರರು ಅವರನ್ನು ತುಂಬಾ ಗೌರವಿಸುತ್ತಾರೆ. ರೋಹಿತ್ ಕೂಡ ಎಲ್ಲ ಆಟಗಾರರನ್ನು ಗೌರವಿಸುತ್ತಾರೆ. ತಂಡದಲ್ಲಿ ಹಲವು ಹಿರಿಯರಿದ್ದಾರೆ ಆದರೆ, ರೋಹಿತ್ ಅತ್ಯುತ್ತಮ ಎಂದು ರಾಹುಲ್ ದ್ರಾವಿಡ್ ಹೊಗಳಿದ್ದಾರೆ.
ಹಿರಿಯ ಆಟಗಾರರಾದ ಬುಮ್ರಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಜತೆಗೆ ಉಳಿದ ಆಟಗಾರರು ಡ್ರೆಸ್ಸಿಂಗ್ ಕೊಠಡಿಯನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತಾರೆ ಎಂದು ದ್ರಾವಿಡ್ ಹೇಳಿದರು.
ಅಂದಹಾಗೆ 2021ರ ಟಿ20 ವಿಶ್ವಕಪ್ ಬಳಿಕ ದ್ರಾವಿಡ್ ಮುಖ್ಯ ಕೋಚ್ ಮತ್ತು ರೋಹಿತ್ ಶರ್ಮಾ ನಾಯಕರಾಗಿ ಅಧಿಕಾರ ವಹಿಸಿಕೊಂಡರು ಮತ್ತು ಭಾರತಕ್ಕೆ ಹಲವು ಅದ್ಭುತ ವಿಜಯಗಳನ್ನು ಕೊಡುಗೆ ನೀಡಿದ್ದಾರೆ. ಇವರಿಬ್ಬರ ಅಧಿಕಾರಾವಧಿಯಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2021-2023 ಫೈನಲ್ ಮತ್ತು ODI ವಿಶ್ವಕಪ್ 2023 ಫೈನಲ್ನೊಂದಿಗೆ ಇತರ ಪ್ರಮುಖ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. (ಏಜೆನ್ಸೀಸ್)