ಪಾಕ್​ ವಿರುದ್ಧದ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಬದಲಾವಣೆ?; ನಾಯಕ ರೋಹಿತ್​​ ಶರ್ಮಾ ಹೇಳಿದ್ದಿಷ್ಟು

Rohit Sharma
Published on

ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ​ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಪಾಕ್​ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ ಟೀಮ್​ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲಾಗುವುದು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮಾತನಾಡಿದ್ದಾರೆ.

ನಸ್ಸೌ ಕೌಂಟಿ ಕ್ರಿಕೆಟ್​ ಮೈದಾನದಲ್ಲಿ ಜೂನ್​ 05ರಂದು ನಡೆದ ಭಾರತ ಹಾಗೂ ಐರ್ಲೆಂಡ್​ ನಡುವಿನ ಟಿ20 ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಓಪನರ್ಸ್​ ಆಗಿ ಕಣಕ್ಕಿಳಿದಿದ್ದರು. ಆದರೆ, ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲದ ವಿರಾಟ್​ 01 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಬದಲು ಯಶಸ್ವಿ ಜೈಸ್ವಾಲ್​ರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಅಂತಿಮವಾಗಿ ಪಂದ್ಯದ ಟಾಸ್​ ಬಳಿಕ ಇದು ತಿಳಿದು ಬರಲಿದೆ.

Rohit Kohli

ಪಂದ್ಯ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರೋಹಿತ್, ಈಗಾಗಲೇ ಆಡುವ ಬಳಗವನ್ನು ಆಯ್ಕೆ ಮಾಡಲಾಗಿದ್ದು, ಆರಂಭಿಕರನ್ನು ನಿಗದಿಪಡಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದಲ್ಲದೆ ಬೌಲರ್​ಗಳ ಬದಲಾವಣೆ ಕುರಿತಾದ ಪ್ರಶ್ನೆಗೆ ರೋಹಿತ್​ ಸಂಜಸವಾದ ಉತ್ತರವನ್ನು ನೀಡಿಲ್ಲ. ಹೀಗಾಗಿ ತಂಡದಲ್ಲಿ ಬದಲಾವಣೆಯಾಗುತ್ತ ಇಲ್ಲವಾ ಎಂಬುದರ ಕುರಿತು ಸಸ್ಪೆನ್ಸ್​ ಕ್ರಿಯೇಟ್​ ಮಾಡಿದ್ದಾರೆ.

ಒಂದು ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಪದಾರ್ಪಣೆ ಅವರಿಗೆ ಸೂರ್ಯಕುಮಾರ್​ ಅಥವಾ ಶಿವಂ ದುಬೆ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಇದಲ್ಲದೆ ಅಕ್ಷರ್​ ಪಟೇಲ್​​ ಬದಲಿಗೆ ಕುಲ್​ದೀಪ್​ ಯಾದವ್​ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯಗಳಲ್ಲಿನ ಹಿಂದಿನ ದಾಖಲೆಗಳನ್ನು ಪರಿಗಣಿಸಿ ಕುಲ್​ದೀಪ್​ಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಹೇಳಲಾಗಿದೆ. ಅಂತಿಮವಾಗಿ ಪಂದ್ಯದ ಟಾಸ್​ ಬಳಿಕ ಇದು ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net