ಕೆಕೆಆರ್​, ಮುಂಬೈ ಇಂಡಿಯನ್ಸ್​ ತಂಡಗಳ ಅಭ್ಯಾಸಕ್ಕೆ ಅನುಮತಿ...

kkr and mumbai team for web
Published on

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ತಂಡಗಳಾದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ತಂಡಗಳಿಗೆ ಅಭ್ಯಾಸ ನಡೆಸಲು ಸ್ಥಳೀಯ ಆಡಳಿತ ಅನುಮತಿ ನೀಡಿದೆ. ಅಬುಧಾಬಿಯಲ್ಲಿ ಎರಡು ತಂಡಗಳು ಉಳಿದುಕೊಂಡಿದ್ದು, ಸ್ಥಳೀಯ ನಿಯಮದ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಬೇಕಿದೆ. ಆದರೆ, ದುಬೈನಲ್ಲಿ ಉಳಿದುಕೊಂಡಿರುವ ತಂಡಗಳು 6 ದಿನಗಳ ಕಡ್ಡಾಯ ಕ್ವಾರಂಟೈನ್​ ಮುಗಿಸಿ ಅಭ್ಯಾಸ ಆರಂಭಿಸಿವೆ. ಇದರಿಂದ ಮುಂಬೈ ಹಾಗೂ ಕೆಕೆಆರ್​ ತಂಡಗಳು ಅಭ್ಯಾಸ ಆರಂಭಿಸಲು ಅನುಮತಿ ಕೇಳಿದ್ದವು. ಇದೀಗ ಐಪಿಎಲ್​ ಆಡಳಿತ ಮಂಡಳಿ ಎಮಿರೈಟ್ಸ್​ ಕ್ರಿಕೆಟ್​ ಮಂಡಳಿ (ಇಸಿಬಿ) ಜತೆ ಗುರುವಾರ ಮಾತುಕತೆ ನಡೆಸಿ ಅಭ್ಯಾಸ ಅನುಮತಿ ದೊರಕಿಸಿಕೊಟ್ಟಿದೆ.

ಇಸಿಬಿ ಮುಖ್ಯಸ್ಥರೊಂದಿಗೆ ಐಪಿಎಲ್​ ಚೇರ್ಮನ್​ ಬ್ರಿಜೇಶ್​ ಪಟೇಲ್​ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ತಕ್ಷಣವೇ ಅಭ್ಯಾಸಕ್ಕೆ ಅನುಮತಿ ನೀಡಿದೆ. ದುಬೈ ಹಾಗೂ ಅಬುಧಾಬಿ ನಗರಗಳಿಗೆ ಪ್ರತ್ಯೇಕ ಕೋವಿಡ್​-19 ಶಿಷ್ಟಾಚಾರವಿದ್ದು, ಅಬುಧಾಬಿಯಲ್ಲಿ ರ್ಯಾಪಿಡ್ ಟೆಸ್ಟ್​ಗೆ ಒಳಗಾಗುವುದು ಕಡ್ಡಾಯವಾಗಿದೆ. ಇದರಿಂದಲೇ ಬಿಸಿಸಿಐ ಲೀಗ್​ ವೇಳಾಪಟ್ಟಿ ಪ್ರಕಟಿಸಲು ತಡಮಾಡುತ್ತಿದೆ ಎನ್ನಲಾಗಿದೆ. ಈ ಕುರಿತು ಐಪಿಎಲ್​ ಆಡಳಿತ ಮಂಡಳಿ ಇಸಿಬಿ ಜತೆ ಸತತವಾಗಿ ಮಾತುಕತೆಯಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ರಾಜಸ್ಥಾನ ರಾಯಲ್ಸ್​ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿದರೆ, ಆರ್​ಸಿಬಿ ಶುಕ್ರವಾರದಿಂದ ಅಭ್ಯಾಸ ಆರಂಭಿಸಿದೆ. 169 ದಿನಗಳ ಬಳಿಕ ಕ್ರಿಕೆಟ್​ಗೆ ವಾಪಸಾಗಿದ್ದು ಖುಷಿ ನೀಡಿದೆ ಎಂದು ರಾಹುಲ್​ ಅಭ್ಯಾಸ ಮಾಡುತ್ತಿರುವ ಫೋಟೋದೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net