ಮೊಣಕಾಲಿನಲ್ಲೇ ತಿರುಪತಿ ಮೆಟ್ಟಿಲು ಹತ್ತಿದ ಟೀಮ್​ ಇಂಡಿಯಾದ ಖ್ಯಾತ ಕ್ರಿಕೆಟಿಗ! Tirupati

Tirupati
Published on

Tirupati : ಟೀಮ್​ ಇಂಡಿಯಾ ಯುವ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ ( Nitish Kumar Reddy ) ಅವರು ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನಿತೀಶ್​ ಕುಮಾರ್​ ಅವರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗಿ ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವೈರಲ್​​ ಆಗಿದೆ.

ಪ್ರತಿಷ್ಠಿತ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಅಂಗವಾಗಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತೆಲುಗು ಹುಡುಗ ನಿತೀಶ್ ಕುಮಾರ್ ರೆಡ್ಡಿ ಅವರು ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದರು. ಆಲ್​ರೌಂಡರ್ ಆಗಿ ಟೀಮ್​ ಇಂಡಿಯಾ ಸೇರಿಕೊಂಡ ನಿತೀಶ್​, ಮೆಲ್ಬೋರ್ನ್​ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 171 ಎಸೆತಗಳಲ್ಲಿ 114 ರನ್​ ಗಳಿಸುವ ಮೂಲಕ ಚೊಚ್ಚಲ ಶತಕವನ್ನು ಗಳಿಸಿದರು.

ಈ ಪಂದ್ಯದಲ್ಲಿ ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ನಿತೀಶ್, ಮೊದಲ ಎಸೆತದಿಂದಲೇ ಸ್ಥಿರ ಪ್ರದರ್ಶನ ನೀಡಿದರು. 8ನೇ ಸ್ಥಾನದಲ್ಲಿ ಬಂದು ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ (87) ಅವರ ಹೆಸರಿನಲ್ಲಿತ್ತು. ಆ ದಾಖಲೆಯನ್ನು ನಿತೀಶ್​ ಮುರಿದಿದ್ದಾರೆ. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಐದು ಟೆಸ್ಟ್‌ ಪಂದ್ಯದಲ್ಲಿ ನಿತೀಶ್ ಅವರು 37.25 ಸರಾಸರಿಯಲ್ಲಿ 298 ರನ್ ಗಳಿಸಿದರು. ಬೌಲಿಂಗ್‌ನಲ್ಲಿಯೂ 5 ವಿಕೆಟ್‌ಗಳೊಂದಿಗೆ ಮಿಂಚಿದರು.

ನಿತೀಶ್ ಕುಮಾರ್ ರೆಡ್ಡಿ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ ತಮ್ಮ ತವರು ವಿಶಾಖಪಟ್ಟಣಂ ತಲುಪಿದಾಗ, ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ನಿತೀಶ್​ಗೆ ಹೂಮಾಲೆ ಮತ್ತು ಹೂಗುಚ್ಛಗಳನ್ನು ಅರ್ಪಿಸಿ ಬರಮಾಡಿಕೊಂಡರು. ಅನೇಕ ಅಭಿಮಾನಿಗಳು ಆಟೋಗ್ರಾಫ್ ಮತ್ತು ಫೋಟೋಗಳನ್ನು ತೆಗೆದುಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net