ಟೀಮ್ ಇಂಡಿಯಾ ಜೆರ್ಸಿಯಿಂದ ನೈಕಿ ಮಾಯ?

nyke
Published on

ನವದೆಹಲಿ: ಅಮೆರಿಕದ ಪ್ರತಿಷ್ಠಿತ ಕ್ರೀಡಾ ಉಡುಪುಗಳ ಬ್ರಾಂಡ್ ‘ನೈಕಿ’ ಕಳೆದ 14 ವರ್ಷಗಳಿಂದ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವ ಹೊಂದಿದೆ. ಆದರೆ ಲಾಕ್​ಡೌನ್ ನಂತರದಲ್ಲಿ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ನೈಕಿಯ ಲಾಂಛನ ಟೀಮ್ ಇಂಡಿಯಾದ ಸಮವಸ್ತ್ರದಿಂದ ಮಾಯವಾಗುವ ಸಾಧ್ಯತೆ ಹೆಚ್ಚಿದೆ.

ಲಾಕ್​ಡೌನ್​ನಿಂದಾಗಿ ನೈಕಿ ಕಂಪನಿಗೆ ಸಾಕಷ್ಟು ಹೊಡೆತ ಬಿದ್ದಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದಾಗಿ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕನಾಗಿ ಮುಂದುವರಿಯುವುದು ಅನುಮಾನವೆನಿಸಿದೆ. ಬಿಸಿಸಿಐ ಜತೆಗೆ ನೈಕಿ ಹೊಂದಿರುವ ಹಾಲಿ ಒಪ್ಪಂದ ಮುಂದಿನ ಸೆಪ್ಟೆಂಬರ್​ನಲ್ಲಿ ಕೊನೆಗೊಳ್ಳಲಿದೆ. 4 ವರ್ಷಗಳ ಈ ಒಪ್ಪಂದ 370 ಕೋಟಿ ರೂ. ಮೊತ್ತದ್ದಾಗಿದೆ. ಇದರನ್ವಯ ಪ್ರತಿ ಪಂದ್ಯಕ್ಕೆ 85 ಲಕ್ಷ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸುತ್ತದೆ. ಜತೆಗೆ ವಾರ್ಷಿಕ 12-15 ಕೋಟಿ ರೂ. ರಾಯಲ್ಟಿ ನೀಡುತ್ತದೆ. ಇದಲ್ಲದೆ ಟೀಮ್ ಇಂಡಿಯಾಗೆ ಸಮವಸ್ತ್ರ, ಶೂಗಳು ಮತ್ತು ಇತರ ಪರಿಕರಗಳನ್ನು ಉಚಿತವಾಗಿ ಪೂರೈಸುತ್ತದೆ.

ಬಿಸಿಸಿಐ ಮತ್ತು ನೈಕಿ ನಡುವಿನ ಸಂಬಂಧ ಬಹಳ ಹಳೆಯದಾಗಿದೆ. 2006ರಿಂದಲೂ ನೈಕಿ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕನಾಗಿದೆ. ಆದರೆ ಸೆಪ್ಟೆಂಬರ್ ನಂತರದಲ್ಲೂ ಒಪ್ಪಂದ ಮುಂದುವರಿಸಬೇಕಾದರೆ, ಹಿಂದಿನ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಚರ್ಚೆ ನಡೆಸಬಹುದು. ಆದರೆ ಬಿಸಿಸಿಐ ಇದಕ್ಕೆ ಒಪ್ಪಿಕೊಳ್ಳುವುದು ಅನುಮಾನ ಮತ್ತು ಹೊಸದಾಗಿ ಕಿಟ್ ಒಪ್ಪಂದಕ್ಕೆ ಟೆಂಡರ್ ಆಹ್ವಾನಿಸಬಹುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಲಾಕ್​ಡೌನ್​ನಿಂದಾಗಿ ಟೀಮ್ ಇಂಡಿಯಾದ ಸುಮಾರು 12 ಪಂದ್ಯಗಳು ಈಗಾಗಲೆ ರದ್ದುಗೊಂಡಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಏಕದಿನ ಸರಣಿ ಮೊಟಕುಗೊಂಡಿದ್ದರೆ, ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳೂ ರದ್ದುಗೊಂಡಿವೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net