ಚಿನ್ನದ ಹುಡುಗನಿಗೆ ಮತ್ತೊಮ್ಮೆ ನಿರಾಸೆ; ಕೇವಲ 0.01 ಮೀ. ಅಂತರದಲ್ಲಿ ನೀರಜ್​ ಕೈತಪ್ಪಿದ ಡೈಮಂಡ್ ಲೀಗ್ ಟ್ರೋಫಿ

Neeraj Chopra
Published on

ಬ್ರಸೆಲ್ಸ್​: ಭಾರತದ ಅಥ್ಲೀಟ್, ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದಿರುವ ನೀರಜ್ ಚೋಪ್ರಾ ಶನಿವಾರ ಇಲ್ಲಿ ನಡೆದ ಡೈಮಂಡ್ ಲೀಗ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಗ್ರೆನೆಡಾದ ಪೀಟರ್ಸ್‌ ಆ್ಯಂಡರ್ಸನ್​ಗೆ ನಿಕಟ ಪೈಪೋಟಿ ಒಡ್ಡಿದ ನೀರಜ್​ಗೆ 0.01 ಮೀ ಅಂತರದಲ್ಲಿ ಸೋಲುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಆ್ಯಂಡರ್ಸನ್ ಅವರು ತಮ್ಮ ಮೊದಲ ಎಸೆತದಲ್ಲಿಯೇ 87.87 ಮೀಟರ್​ ದೂರ ಎಸೆದರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ  ಎಸೆದರು. ನಂತರದ ಮೂರು ಎಸೆತಗಳಲ್ಲಿ ನೀರಜ್ ಕ್ರಮವಾಗಿ 82.04 ಮೀ, 83.30 ಮೀ ಹಾಗೂ 86.46 ಮೀ ದೂರ ಥ್ರೋ ಮಾಡಿದರು. 

ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಗ್ರೆನಡಾದ ಪೀಟರ್ಸ್ ತನ್ನ ಆರಂಭಿಕ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಎಸೆತವನ್ನು ಸಾಧಿಸಿದರು. ಜರ್ಮನಿಯ ಜೂಲಿಯನ್ ವೆಬರ್ 85.97 ಮೀಟರ್ ಎಸೆದು ಮೂರನೇ ಸ್ಥಾನ ಗಳಿಸಿದರು. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದ ನೀರಜ್ ಪ್ಯಾರಿಸ್‌ನಲ್ಲಿ ನಡೆದ 2024 ಒಲಿಂಪಿಕ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ತಮ್ಮ ಸೀಸನ್​ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಿದರು.

ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಪೀಟರ್ಸ್ ಡೈಮಂಡ್ ಲೀಗ್ ಟ್ರೋಫಿ ಮತ್ತು 30,000 ಡಾಲರ್ (25 ಲಕ್ಷ ರೂ) ನಗದು ಬಹುಮಾನವನ್ನು ಪಡೆಯಲಿದ್ದಾರೆ. ಇತ್ತ ಎರಡನೇ ಸ್ಥಾನ ಗಳಿಸಿರುವ ನೀರಜ್ 12,000 ಡಾಲರ್ (10 ಲಕ್ಷ ರೂ) ನಗದು ಬಹುಮಾನ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net