

ನವದೆಹಲಿ: ಭಾರತದಲ್ಲಿ ಈಗಾಗಲೇ ಹಲವು ಕ್ರೀಡಾ ಲೀಗ್‌ಗಳು ಚಾಲ್ತಿಯಲ್ಲಿವೆ. ಇದೀಗ ಬಾಸ್ಕೆಟ್‌ಬಾಲ್‌ಗೂ ವೃತ್ತಿಪರ ಲೀಗ್ ಬರಲಿ ಎಂಬ ಕೂಗು ಕೇಳಿ ಬಂದಿದೆ. ರಾಷ್ಟ್ರೀಯ ಮಟ್ಟದ ಆಟಗಾರರಿಗೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಪ್ರೀಮಿಯರ್ ಲೀಗ್ ಅಗತ್ಯವಿದೆ ಎಂದು ಭಾರತ ಪುರುಷರ ಬಾಸ್ಕೆಟ್‌ಬಾಲ್ ತಂಡದ ನಾಯಕ ವಿಶೇಷ್ ಬ್ರಿಗುವಂಶಿ ತಿಳಿಸಿದ್ದಾರೆ. 2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್) ಉತ್ತೇಜನಗೊಂಡು ಬ್ಯಾಡ್ಮಿಂಟನ್, ಕುಸ್ತಿ, ಕಬಡ್ಡಿ ಸೇರಿದಂತೆ ಹಲವು ಲೀಗ್‌ಗಳು ಆರಂಭಗೊಂಡವು. ಇದರಿಂದ ಭಾರತದಲ್ಲಿ ಕ್ರೀಡೆ ಗುಣಮಟ್ಟ ಸಾಧಿಸಲು ಕಾರಣವಾಯಿತು. ಬಾಸ್ಕೆಟ್‌ಬಾಲ್‌ಗೂ ಲೀಗ್ ಅಗತ್ಯವಿದೆ ಎಂದು ನಾಯಕ ಹೇಳಿದ್ದಾರೆ.
ಲೀಗ್‌ನಲ್ಲಿ ವಿದೇಶಿ ಆಟಗಾರರು ಆಡುವುದರಿಂದ ಸ್ಪರ್ಧಾತ್ಮಕತೆಯೂ ಹೆಚ್ಚುತ್ತದೆ. ದೇಶೀಯ ಆಟಗಾರರಿಗೆ ಇದೊಂದು ಉತ್ತಮ ಅನುಭವ, ಇದರಿಂದ ಕಲಿಯುವ ಅವಕಾಶ ಹೆಚ್ಚುತ್ತದೆ ಎಂದು 29 ವರ್ಷದ ವಾರಣಾಸಿ ಆಟಗಾರ ಹೇಳಿದ್ದಾರೆ. ದೇಶೀಯ ಲೀಗ್‌ಗಳಿಂದಲೇ ಕ್ರೀಡೆಗಳ ಪ್ರಸಿದ್ಧಿ ಪಡೆಯುತ್ತಿವೆ. ಇದರಿಂದಲೇ ಇತರ ಕ್ರೀಡೆಗಳ ಮಾದರಿಯಲ್ಲಿ ಬಾಸ್ಕೆಟ್‌ಬಾಲ್‌ಗೂ ಲೀಗ್ ಆರಂಭಿಸಿದರೆ ಒಳಿತು ಎಂದಿದ್ದಾರೆ. ಇತ್ತೀಚೆಗೆ ಭಾರತದ ಅಗ್ರ ಆಟಗಾರರಾದ ಸತ್ನಾಮ್ ಸಿಂಗ್, ಅಮ್ಯೋತ್ ಸಿಂಗ್ ಹಾಗೂ ಅಮೃತ್‌ಪಾಲ್ ಸಿಂಗ್ ಈಗಾಗಲೇ ವಿದೇಶಿ ಲೀಗ್‌ಗಳಲ್ಲಿ ಆಡುತ್ತಿದ್ದಾರೆ.
ಆಸ್ಟ್ರೇಲಿಯಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಲೀಗ್ (ಎನ್‌ಬಿಎಲ್) ಜತೆಗೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಆಟಗಾರ ವಿಶೇಷ್ ಬ್ರಿಗುವಂಶಿ. ಅಡಿಲೇಡ್ 36 ತಂಡದ ಪರವಾಗಿ ಆಡಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ಹೊರಗುಳಿದರು. ಸದ್ಯ ಓಎನ್‌ಜಿಸಿಯಲ್ಲಿ ಎಚ್‌ಆರ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.