ಗ್ರ್ಯಾಂಟ್ ಫ್ಲವರ್ ಕುತ್ತಿಗೆಗೆ ಯೂನಿಸ್ ಖಾನ್ ಚಾಕು ಹಿಡಿಯಲು ಮೊಹಮದ್ ಅಜರುದ್ದೀನ್ ಕಾರಣವಿರಬಹುದು ಎಂದ ಲತೀಫ್..!

azar and younis khan for web final
Published on

ಕರಾಚಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್, ಅಂದಿನ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಕುತ್ತಿಗೆ ಚಾಕು ಹಿಡಿಯಲು ಭಾರತ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಕಾರಣವಿರಬಹುದು ಮಾಜಿ ಆಟಗಾರ ರಶೀದ್ ಲತೀಫ್​ ಹೇಳಿದ್ದಾರೆ. 2016-17ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ರನ್‌ಗಳಿಸಲು ಪರದಾಡುತ್ತಿದ್ದ ಯೂನಿಸ್ ಖಾನ್‌ಗೆ ಬ್ರಿಸ್ಬೇನ್‌ನಲ್ಲಿ ಟಿಪ್ಸ್ ಕೊಡಲು ಹೋದಾಗ ಕುತ್ತಿಗೆ ಚಾಕು ಹಿಡಿದಿದ್ದರು ಎಂದು ಗ್ರ್ಯಾಂಟ್ ಫ್ಲವರ್ ಇತ್ತೀಚೆಗೆ ಆರೋಪಿಸಿದ್ದರು. ಈ ಕುರಿತು ಪಿಸಿಬಿ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದರೂ ರಶೀದ್ ಲತೀಫ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಕಾರಣವೊಂದನ್ನು ಬಿಚ್ಚಿಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಪಾಕಿಸ್ತಾನ ತೆರಳುವುದಕ್ಕೂ ಮೊದಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಇಂಗ್ಲೆಂಡ್ ವಿರುದ್ಧ ಸತತ ವೈಫಲ್ಯ ಅನುಭವಿಸಿದ್ದ ಯೂನಿಸ್ ಖಾನ್ ಬೇಸತ್ತಿದ್ದರು. ಈ ವೇಳೆ ಅಜರುದ್ದೀನ್ ನೀಡಿದ ಸಲಹೆಗಳಿಂದಾಗಿ ಯೂನಿಸ್ ಖಾನ್ ಅಂತಿಮ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದರು. ಇದರಿಂದ ಸರಣಿಯೂ 2-2 ಸಮಬಲಗೊಂಡಿತ್ತು. ಆದರೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಏನಾಯಿತು ಎಂದು ಗೊತ್ತಿಲ್ಲ. ಯೂನಿಸ್ ಲಯ ಕಂಡುಕೊಳ್ಳಳು ಅಜರುದ್ದೀನ್ ಅಂತ ಹೇಳಬಹುದು. ಯೂನಿಸ್ ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದಾಗ ಅಜರ್ ಅವರ ಪಾಲಿಗೆ ಆಪತ್ಬಾಂಧವರಾದರು ಎಂದು 51 ವರ್ಷದ ಮಾಜಿ ವಿಕೆಟ್ ಕೀಪರ್ ಭಾರತದ ಮಾಜಿ ನಾಯಕ ಗುಣಗಾನ ಮಾಡಿದ್ದಾರೆ. ರಶೀದ್ ಲತೀಫ್ ಪಾಕಿಸ್ತಾನ ಪರ 37 ಟೆಸ್ಟ್ ಪಂದ್ಯಗಳಿಂದ 2912 ರನ್, 166 ಏಕದಿನ ಪಂದ್ಯಗಳಿಂದ 2237 ರನ್ ಕಲೆಹಾಕಿದ್ದಾರೆ.

ಗ್ರ್ಯಾಂಟ್ ಫ್ಲವರ್ 2014ರಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ 5 ವರ್ಷಗಳ ಅವಧಿಗೆ ನೇಮಿಸಲಾಗಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ಇಡೀ ಸಹಾಯಕ ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು. ಬಳಿಕ ಗ್ರ್ಯಾಂಟ್ ಫ್ಲವರ್ ಶ್ರೀಲಂಕಾದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡರು. ಕಾಕತಾಳೀಯ ಎಂಬಂತೆ ಗ್ರ್ಯಾಂಟ್ ಫ್ಲವರ್ ಬದಲಿಗೆ ಯೂನಿಸ್ ಖಾನ್ ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net