ಫುಟ್​ಬಾಲ್​ ತಾರೆಯಿಂದ ಬೇರ್ಪಟ್ಟ ಬಳಿಕ ಬಾಸ್ಕೆಟ್​ಬಾಲ್​ ಆಟಗಾರನೊಂದಿಗೆ ಶಕೀರಾ ಡೇಟಿಂಗ್​!

shakira web
Published on

ನ್ಯೂಯಾರ್ಕ್​: ಕೊಲಂಬಿಯಾದ ಜನಪ್ರಿಯ ಪಾಪ್​ ಗಾಯಕಿ ಶಕೀರಾ ಮತ್ತೊಮ್ಮೆ ಕ್ರೀಡಾ ವಲಯದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ವಿಶ್ವಕಪ್​ ಟೂರ್ನಿಯ ಧ್ಯೇಯಗೀತೆ "ವಾಕಾ ವಾಕಾ' ಮೂಲಕ ಮೊದಲಿಗೆ ಕ್ರೀಡಾಪ್ರೇಮಿಗಳ ಮನಗೆದ್ದಿದ್ದ ಶಕೀರಾ ನಂತರದಲ್ಲಿ ಕ್ರೀಡಾಪಟುಗಳ ಜತೆಗಿನ ಸಖ್ಯದಿಂದ ಗಮನಸೆಳೆದಿದ್ದರು. ಇದೀಗ ಅಮೆರಿಕದ ಎನ್​ಬಿಎ ಬಾಸ್ಕೆಟ್​ಬಾಲ್​ ಆಟಗಾರ ಜಿಮ್ಮಿ ಬಟ್ಲರ್​ ಜತೆಗಿನ ಡೇಟಿಂಗ್​ನಿಂದ ಶಕೀರಾ ಸುದ್ದಿಗೆ ಗ್ರಾಸವಾಗಿದ್ದಾರೆ.

2011ರಲ್ಲಿ ಸ್ಪೇನ್​ ಫುಟ್​ಬಾಲ್​ ಆಟಗಾರ ಗೆರಾರ್ಡ್​ ಪಿಕ್​ಗೆ ಹತ್ತಿರವಾಗಿದ್ದ ಶಕೀರಾ ನಂತರದಲ್ಲಿ ಅವರ ಇಬ್ಬರು ಗಂಡು ಮಕ್ಕಳಿಗೆ ತಾಯಿಯೂ ಆಗಿದ್ದರು. ಆದರೆ ಕಳೆದ ವರ್ಷ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. 2022ರ ಜೂನ್​ನಲ್ಲಿ ಇಬ್ಬರೂ ಜಂಟಿ ಪ್ರಕಟಣೆಯ ಮೂಲಕ ಪರಸ್ಪರ ದೂರವಾಗುತ್ತಿರುವುದನ್ನು ಖಚಿತಪಡಿಸಿದ್ದರು. 11 ವರ್ಷಗಳ ಸಂಬಂಧ ಮುರಿದು ಬಿದ್ದ ಬಳಿಕ ಬಹುತೇಕ ಏಕಾಂಗಿಯಾಗಿದ್ದ 46 ವರ್ಷದ ಶಕೀರಾ ತಮಗಿಂತ 13 ವರ್ಷ ಕಿರಿಯರಾದ ಜಿಮ್ಮಿ ಬಟ್ಲರ್​ ಜತೆ ಸುತ್ತಾಟ ಆರಂಭಿಸಿದ್ದಾರೆ.

ಎನ್​ಬಿಎ ಟೂರ್ನಿಯ ಪಂದ್ಯದಲ್ಲಿ ಶಕೀರಾ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ 33 ವರ್ಷದ ಜಿಮ್ಮಿ ಬಟ್ಲರ್​ ಜತೆಗಿನ ಸಂಬಂಧ ಬಹುತೇಕ ಅಧಿಕೃತಗೊಂಡಿದೆ. ಶಕೀರಾ-ಜಿಮ್ಮಿ ಕಳೆದ ಕೆಲ ಸಮಯದಿಂದ ಜತೆಯಾಗಿ ಸಮಯ ಕಳೆಯುತ್ತಿದ್ದಾರೆ. ಲಂಡನ್​ ರೆಸ್ಟೋರೆಂಟ್​ಗಳಲ್ಲೂ ಇಬ್ಬರನ್ನೂ ಜತೆಯಾಗಿ ನೋಡಿದವರಿದ್ದಾರೆ ಎಂದೂ ವರದಿಗಳು ಹರಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net