

ನವದೆಹಲಿ: ಈ ಬಾರಿಯ ಐಪಿಎಲ್ 17ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಐದು ಬಾರಿ ಚಾಂಪಿಯನ್ಸ್ ತಂಡ ಮುಂಬೈ ಇಂಡಿಯನ್ಸ್, ಈ ಲೀಗ್ ಅಂತ್ಯಗೊಳ್ಳುವ ಮುನ್ನ ಕೇವಲ ಒಂದೇ ಒಂದು ಪಂದ್ಯವನ್ನು ಆಡುವ ಮೂಲಕ 17ನೇ ಸೀಸನ್ನಿಂದ ಸಂಪೂರ್ಣವಾಗಿ ಹೊರಗುಳಿಯಲಿದೆ. ಈಗಾಗಲೇ ಪ್ಲೇಆಫ್ ಕನಸಿನಿಂದಲೇ ಬಹಳ ದೂರ ಉಳಿದಿರುವ ಮುಂಬೈಗೆ, ಇನ್ನೇನಿದ್ದರೂ ಪ್ಲೇಆಫ್ ಪ್ರವೇಶಿಸಲಿರುವ ತಂಡಗಳ ಪಂದ್ಯ ನೋಡವುದಷ್ಟೇ ಬಾಕಿ.
ಇದನ್ನೂ ಓದಿ: ಅಘೋರಿಗಳ ಜತೆ ಇದ್ದು ಅಧ್ಯಯನದ ಬಗ್ಗೆ ಭೈರವಿ ಅಮ್ಮ ಮಾತು
ನಾಯಕನ ಸ್ಥಾನದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಿ, ಆ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತನ್ನದಾಗಿಸಿಕೊಂಡಿದ್ದೇ ತಡ, ಮುಂಬೈಗೆ ಸತತ ಸೋಲುಗಳು ಎದುರಾಯಿತು. ಹೀನಾಯ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಈಗ ಲೀಗ್ನಿಂದ ಹೊರಗುಳಿದಿದೆ. ಅತ್ಯಂತ ಕಳಪೆ ಪ್ರದರ್ಶನ ನೀಡಿದರ ಬಗ್ಗೆ ಮುಕ್ತವಾಗಿ ಮಾತನಾಡಿದ ತಂಡದ ಆಲ್ರೌಂಡರ್ ನಮನ್ ಧೀರ್, ತಮ್ಮ ಟೀಮ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಯಾರು ಒಳ್ಳೆಯ ಪ್ರೋತ್ಸಾಹ ನೀಡಲಿಲ್ಲ ಎಂದು ನೇರ ಆರೋಪ ಎಸಗಿದ್ದಾರೆ.
"ಅನುಭವಕ್ಕಿಂತ ನಮ್ಮ ತಪ್ಪುಗಳು ನಮಗೆ ಹೆಚ್ಚು ಪಾಠ ಕಲಿಸುತ್ತದೆ ಎಂಬುದನ್ನು ನಾನು ಅರಿತಿದ್ದೇನೆ. ಈ ಸೀಸನ್ನಲ್ಲಿ ಆಡಿದ ಒಂದಷ್ಟು ಪಂದ್ಯಗಳಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಎಷ್ಟು ಕೂಲ್ ಆಗಿರಬೇಕು, ಹೇಗೆ ನನ್ನ ಆಟದ ಬಗ್ಗೆ ಗಮನಹರಿಸಬೇಕು ಎಂಬ ಹಲವಾರು ವಿಷಯಗಳನ್ನು ಚೆನ್ನಾಗಿ ತಿಳಿದಿದ್ದೇನೆ. ಖಂಡಿತವಾಗಿ ಈ ಸೀಸನ್ ನಮ್ಮದಾಗಿರಲಿಲ್ಲ" ಎಂದರು.
ಇನ್ನು ಮುಕ್ತವಾಗಿ ಮಾತನಾಡಿದ ಧೀರ್, "ನಮ್ಮ ತಂಡದ ಬಲಿಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ತಂಡದ ಇತರೆ ಬೌಲರ್ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ. ನಿಜಕ್ಕೂ ಅವರೊಬ್ಬ ಅತ್ಯುತ್ತಮ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲದರಿಂದ ಕಲಿತು, ಮುಂದಿನ ಸೀಸನ್ನಲ್ಲಿ ಒಳ್ಳೆಯ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).