ನನಗೆ ಯಾವುದೇ... ಭಾರತದ ವಿರುದ್ಧ ಎಕೆ 47 ಸಂಭ್ರಮಾಚರಣೆ ಬಗ್ಗೆ ಸೊಕ್ಕಿನ ಹೇಳಿಕೆ ನೀಡಿದ ಫರ್ಹಾನ್! Sahibzada Farhan

Sahibzada Farhan
Published on

Sahibzada Farhan : ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್, ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಅತಿರೇಕದ ವರ್ತನೆಯಿಂದಾಗಿ ಭಾರಿ ಟೀಕೆ ಗುರಿಯಾಗಿದ್ದಾರೆ. ಅರ್ಧಶತಕ ಬಾರಿಸಿದ ಬಳಿಕ ಬ್ಯಾಟ್​ ಅನ್ನು ಎಕೆ-47 ರೀತಿಯಲ್ಲಿ ಹಿಡಿದು ಶೂಟ್​ ಮಾಡುವ ರೀತಿ ಸಂಭ್ರಮಿಸಿದರು. ಇದು ಎಲ್ಲಡೆ ಆಕ್ರೋಶಕ್ಕೆ ಗುರಿಯಾಗಿದೆ.

ಈ ವಿವಾದದ ಬಗ್ಗೆ ಮೌನ ಮುರಿದಿರುವ ಫರ್ಹಾನ್​, ನನ್ನ ಸಂಭ್ರಮಾಚರಣೆ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಅದು ನನ್ನ ನಿರ್ಧಾರವಾಗಿತ್ತು. ಈ ವಿಚಾರದಲ್ಲಿ ಯಾರು ಏನೇ ಯೋಚಿಸಿದರೂ ಪರವಾಗಿಲ್ಲ, ನನಗೆ ಅದರ ಬಗ್ಗೆ ಚಿಂತೆಯೂ ಇಲ್ಲ ಎಂದರು. ಶ್ರೀಲಂಕಾ ವಿರುದ್ಧ ನಾಳೆ (ಸೆ.23) ನಡೆಯಲಿರುವ ಎರಡನೇ ಸೂಪರ್​-4 ಪಂದ್ಯಕ್ಕೂ ಮುನ್ನ ಇಂದು (ಸೆ.22) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸಂಭ್ರಮಾಚರಣೆ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಫರ್ಹಾನ್ ಮೇಲಿನಂತೆ​ ಉತ್ತರಿಸಿದರು.

ನೀವು ಸಿಕ್ಸರ್‌ಗಳ ಬಗ್ಗೆ ಮಾತನಾಡಿದರೆ, ಭವಿಷ್ಯದಲ್ಲಿ ನೀವು ಅದನ್ನು ಬಹಳಷ್ಟು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಇನ್ನು ನನ್ನ ಸಂಭ್ರಮಾಚರಣೆಯು ಆ ಸಮಯದಲ್ಲಿ ಕೇವಲ ಒಂದು ಕ್ಷಣವಾಗಿತ್ತು. 50 ರನ್ ಗಳಿಸಿದ ನಂತರ ನಾನು ಹೆಚ್ಚು ಆಚರಣೆಗಳನ್ನು ಮಾಡುವುದಿಲ್ಲ. ಆದರೆ, ಇಂದು ಆಚರಣೆಯನ್ನು ಮಾಡೋಣ ಎಂದು ಇದ್ದಕ್ಕಿದ್ದಂತೆ ನನ್ನ ಮನಸ್ಸಿಗೆ ಬಂದಿತು. ನಾನು ಅದನ್ನು ಮಾಡಿದೆ. ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ನನಗೆ ಅದರ ಬಗ್ಗೆ ಕಾಳಜಿಯೂ ಇಲ್ಲ. ಭಾರತ ಅಂತ ಅಲ್ಲ, ನೀವು ಎಲ್ಲಿ ಆಡಿದರೂ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು ಎಂದರು.

ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ಪಾಕಿಸ್ತಾನದ ಮುಂದಿನ ಕಾರ್ಯತಂತ್ರದ ಬಗ್ಗೆ ಕೇಳಿದಾಗ ಉತ್ತರಿಸಿದ ಫರ್ಹಾನ್, ನಮ್ಮ ತಂಡವು ಪವರ್‌ಪ್ಲೇಗಳಲ್ಲಿ ಕೆಲವು ವಿಕೆಟ್‌ಗಳನ್ನು ಬೇಗ ಕಳೆದುಕೊಳ್ಳುತ್ತದೆ. ಅದನ್ನು ಸರಿಪಡಿಸುವುದು ಮುಖ್ಯವಾಗಿದೆ. ಇದರ ಜೊತೆಗೆ ಮೊದಲ ಆರು ಓವರ್‌ಗಳಲ್ಲಿ ಸ್ಕೋರ್​ ಬೋರ್ಡ್‌ನಲ್ಲಿ ಹೆಚ್ಚು ರನ್​ ಸಂಗ್ರಹವಾಗುವಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದರು.

ಕಳೆದ ಕೆಲವು ಪಂದ್ಯಗಳಲ್ಲಿ ನಾವು ಪವರ್‌ಪ್ಲೇಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿರಲಿಲ್ಲ ಎಂಬುದು ನಮ್ಮ ಕೊರತೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಆರಂಭಿಕ ವಿಕೆಟ್‌ಗಳನ್ನು ನೀಡುತ್ತಿದ್ದೆವು. ಪವರ್‌ಪ್ಲೇಗಳನ್ನು ಚೆನ್ನಾಗಿ ಬಳಸುವುದು ಮುಖ್ಯ ಮತ್ತು ವಿಕೆಟ್‌ಗಳನ್ನು ಬಿಟ್ಟುಕೊಡಬಾರದು. ಆದರೆ, ಟೀಮ್​ ಇಂಡಿಯಾ ವಿರುದ್ಧ ನಾವು ಪವರ್‌ಪ್ಲೇಗಳಲ್ಲಿ ಆಡಿದ ರೀತಿ ನೋಡಿದರೆ, ನಾವು ಬೇಗನೆ ವಿಕೆಟ್ ಬಿಟ್ಟುಕೊಡಲಿಲ್ಲ. ನಮ್ಮ ಪವರ್‌ಪ್ಲೇ ಕೂಡ ತುಂಬಾ ಚೆನ್ನಾಗಿತ್ತು ಏಕೆಂದರೆ, ನಾವು 10 ಓವರ್‌ಗಳಲ್ಲಿ 90 ರನ್ ಗಳಿಸಿದೆವು. ಆದರೆ, ಮಧ್ಯದಲ್ಲಿ ನಾವು ಕುಸಿತ ಕಂಡೆವು ಆದರೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದು ಫರ್ಹಾನ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net