ಹೋಟೆಲ್​​ಗೆ ಕರೆಸಿ ಪ್ರೇಯಸಿಯ ಬರ್ಬರ ಹತ್ಯೆ: ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ! Gayathri murder case

Gayathri murder case
Published on

Gayathri murder case : ಕೇರಳದಲ್ಲಿ ಭಾರಿ ಸದ್ದು ಮಾಡಿದ್ದ ಗಾಯತ್ರಿ (25) ಕೊಲೆ ಪ್ರಕರಣದಲ್ಲಿ ಆಕೆಯ ಪ್ರಿಯಕರನಿಗೆ ತಿರುವನಂತಪುರಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, 1 ಲಕ್ಷ ರೂ. ದಂಡ ಪಾವತಿಸಲು ಸಹ ಆದೇಶಿಸಿದೆ.

ಶಿಕ್ಷೆಗೆ ಗುರಿಯಾದ ಪ್ರಿಯಕರನನ್ನು ಪ್ರವೀಣ್​ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ 2022ರ ಮಾರ್ಚ್ 5ರಂದು ನಡೆದಿತ್ತು. ಕೊಲೆಯಾದ ಗಾಯತ್ರಿ ಕೇರಳದ ಥಂಪನೂರಿನ ಕಟ್ಟಕ್ಕಡ ನಿವಾಸಿ. ಸುಜಾತ ಮತ್ತು ದಿವಂಗತ ಮರಿಯಪ್ಪನ್ ದಂಪತಿಯ ಪುತ್ರಿ. ತಿರುವನಂತಪುರಂನ ಪ್ರಮುಖ ಆಭರಣ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಗಾಯತ್ರಿ ಮತ್ತು ಕೊಲ್ಲಂನ ಪರವೂರು ಮೂಲದ ಪ್ರವೀಣ್ ನಡುವೆ ಪ್ರೀತಿ ಇತ್ತು.

ಇಬ್ಬರು ಮಕ್ಕಳ ತಂದೆಯಾಗಿದ್ದ ಪ್ರವೀಣ್ ಅದನ್ನು ಮರೆಮಾಚುವ ಮೂಲಕ ಗಾಯತ್ರಿಗೆ ಹತ್ತಿರವಾದನು. ಆದಾಗ್ಯೂ, ನಂತರದಲ್ಲಿ ಗಾಯತ್ರಿಗೆ ಈ ಬಗ್ಗೆ ತಿಳಿದಾಗ ಪ್ರವೀಣ್ ಬಳಿ ಪ್ರಶ್ನೆ ಮಾಡಿದಳು. ತನ್ನ ಹಿಂದಿನ ವೈವಾಹಿಕ ಸಂಬಂಧವನ್ನು ಕೊನೆಗೊಳಿಸುವುದಾಗಿ ಆತ ಭರವಸೆ ನೀಡಿದ್ದನು. ಇದಾದ ನಂತರ ಅವರಿಬ್ಬರು ತಿರುವನಂತಪುರದ ಚರ್ಚ್‌ನಲ್ಲಿ ವಿವಾಹವಾದರು.

ಮದುವೆ ವಿಷಯ ತಿಳಿದ ನಂತರ, ಪ್ರವೀಣ್​ನ ಮೊದಲ ಪತ್ನಿ ಆಭರಣ ಅಂಗಡಿಗೆ ಹೋಗಿ ಗಲಾಟೆ ಮಾಡಿದ್ದರು. ಅದೇ ನೋವಿನಲ್ಲಿ ಗಾಯತ್ರಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಆದಾಗ್ಯೂ, ಪ್ರವೀಣ್ ಜತೆಗಿನ ಆಕೆಯ ಸಂಬಂಧ ಮುಂದುವರೆಯಿತು. ಆಭರಣ ಅಂಗಡಿಗೆ ರಾಜೀನಾಮೆ ನೀಡಿದ ಬಳಿಕ ಗಾಯತ್ರಿ ವೀರನಕಾವುವಿನ ಅರುವಿಕುಳಿಯಲ್ಲಿರುವ ಜಿಮ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು.

ಘಟನೆ ನಡೆದ ದಿನ ಗಾಯತ್ರಿಯನ್ನು ಥಂಪನೂರಿನ ಹೋಟೆಲ್‌ಗೆ ಕರೆಸಿದ ಪ್ರವೀಣ್​, ಆಕೆಯ ಕುತ್ತಿಗೆಗೆ ಚೂಡಿದಾರ್ ಶಾಲನ್ನು ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಿದನು. ಆರಂಭದಲ್ಲಿ ಆಕೆಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದನು. ಅದರಂತೆ ಗಾಯತ್ರಿಯ ಫೋನ್ ತೆಗೆದುಕೊಂಡ ಪ್ರವೀಣ್, ಅವರಿಬ್ಬರೂ ಒಟ್ಟಿಗೆ ಇರುವ ಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ. ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಈ ಪ್ರಯತ್ನ ಮಾಡಲಾಗಿತ್ತು.

ಒಟ್ಟಿಗೆ ಇರುವ ಚಿತ್ರಗಳನ್ನು ನೋಡಿದ ನಂತರ ಅವರಿಬ್ಬರ ನಡುವೆ ಜಗಳವಾಗಿದೆ ಮತ್ತು ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಪೊಲೀಸ್​ ತನಿಖೆಯಲ್ಲಿ ಎಲ್ಲವೂ ಬಯಲಾದಾಗ ಆತ ಪೊಲೀಸರಿಗೆ ಶರಣಾದನು. ಅಂತಿಮವಾಗಿ ಪ್ರವೀಣ್​ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net