'ಕ್ಯಾಪ್ಟನ್ ಕೂಲ್' ಮೊದಲ ಆಯ್ಕೆ ಆಗಿರಲಿಲ್ಲ! ಹೊರಬಿತ್ತು ಅಸಲಿ ಸಂಗತಿ | MS Dhoni

ವಿಜಯವಾಣಿ - 2024-12-09T192303.472
Published on

ನವದೆಹಲಿ: ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ಬಲಶಾಲಿ ಹಾಗೂ ಐದು ಬಾರಿ ಚಾಂಪಿಯನ್ಸ್​ ಪಟ್ಟ ಅಲಂಕರಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್​, ಇದೀಗ ಆರನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಡಲು ಎದುರುನೋಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಹರಾಜಿನಲ್ಲಿ ಸಿಎಸ್​ಕೆಗೆ ಮರಳಿದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ, ತಂಡದಲ್ಲಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಯೆಲ್ಲೋ ಬಣ ಅಂದಾಕ್ಷಣ ಕ್ರಿಕೆಟ್ ಪ್ರೇಮಿಗಳ ಕಣ್ಮುಂದೆ ಬರುವುದೇ ಧೋನಿ (MS Dhoni). 'ಕ್ಯಾಪ್ಟನ್ ಕೂಲ್' ಇಲ್ಲದ ಐಪಿಎಲ್​ ಊಹಿಸಿಕೊಳ್ಳುವುದೇ ಕಷ್ಟ ಎನ್ನುವ ಫ್ಯಾನ್ಸ್​, ಅವರಿಲ್ಲದೆ ಸಿಎಸ್​ಕೆ ಅಷ್ಟು ಗಟ್ಟಿ ಎನಿಸುವುದಿಲ್ಲ ಎಂದೇ ಹೇಳುತ್ತಾರೆ.

ತಮ್ಮ ವಿಕೆಟ್ ಕೀಪಿಂಗ್, ಬ್ಯಾಟಿಂಗ್ ಕೌಶಲ್ಯಗಳನ್ನು ಮೀರಿ ಅತ್ಯುತ್ತಮ ನಾಯಕತ್ವದ ಮೂಲಕ ತಂಡವನ್ನು ಐದು ಬಾರಿ ಚಾಂಪಿಯನ್​​ ಪಟ್ಟಕ್ಕೇರಿಸಿರುವ ಎಂ.ಎಸ್​.ಧೋನಿ, ಸಿಎಸ್​ಕೆಗೆ ಮೊದಲ ಆಯ್ಕೆ ಆಗಿರಲೇ ಇಲ್ಲ ಎಂಬ ಶಾಕಿಂಗ್ ವಿಚಾರ ಹೊರಬಿದ್ದಿದೆ. 2008ರಲ್ಲಿ ಶುರುವಾದ ಐಪಿಎಲ್​ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯ ಗಮನದಲ್ಲಿ ಧೋನಿಯ ಚಹರೆಯೇ ಇರಲಿಲ್ಲವಂತೆ. ಆದರೆ, ಅಂತಿಮವಾಗಿ ಅವರನ್ನು ತಂಡಕ್ಕೆ ಕರೆದುಕೊಳ್ಳಲಾಯಿತು ಎಂದು ಹೇಳಲಾಗಿದೆ. ಇದರ ಬಗ್ಗೆ ಮಾಜಿ ಕ್ರಿಕೆಟಿಗ ಬದ್ರಿನಾಥ್ ಸ್ಪಷ್ಟನೆ ನೀಡಿದ್ದಾರೆ.

ಮೊದಲ ಆಯ್ಕೆ

ತಂಡದ ಮಾಜಿ ಆಟಗಾರ ಎಸ್. ಬದ್ರಿನಾಥ್ ಸಂದರ್ಶನದಲ್ಲಿ ಮಾತನಾಡಿ, “ನನ್ನ ಪ್ರಕಾರ ದಿವಂಗತ ಶ್ರೀ ವಿ.ಬಿ. ಚಂದ್ರಶೇಖರ್ ಅವರು ಅಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ. ನಾನು ಅವರಿಗೆ ಕೃತಜ್ಞ. ಏಕೆಂದರೆ, ನನ್ನನ್ನು ಟೀಮ್​ಗೆ ಆಯ್ಕೆ ಮಾಡಿಕೊಂಡಿದ್ದು ಅವರೇ. ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿದ್ದು ಕೂಡ ಅವರೇ. ಆದರೆ, ಅದಕ್ಕೂ ಮೊದಲು, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ವೀರೇಂದ್ರ ಸೆಹ್ವಾಗ್ ಅವರನ್ನು ತಮ್ಮ ಮೊದಲ ಆಯ್ಕೆಯಾಗಿ ಪರಿಗಣಿಸಿತ್ತು. ಆಕ್ರಮಣಕಾರಿ ಆರಂಭಿಕ ಬ್ಯಾಟರ್​ ಆಗಿದ್ದ ಸೆಹ್ವಾಗ್, ಕ್ಯಾಪ್ಟನ್​ ಆಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂದು ಭಾವಿಸಿದ್ದರು. ಆದರೆ, ಹರಾಜಿನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್​ಗೆ ಖರೀದಿಯಾದರು. ಇದು ಲೆಕ್ಕಾಚಾರ ಬದಲಿಸಿತು" ಎಂದು ಹೇಳಿದರು.

ಅನ್​ಕ್ಯಾಪ್ಡ್​ ಆಟಗಾರ

ತಮ್ಮ ಮೊದಲ ಆಯ್ಕೆಯಾಗಿದ್ದ ಸೆಹ್ವಾಗ್​ ಡೆಲ್ಲಿ ಪರ ಆಡಲು ಇಚ್ಛಿಸಿದಾಗ ಫ್ರಾಂಚೈಸಿ ಕಣ್ಣಿಗೆ ಬಿದ್ದಿದ್ದು 'ಕ್ಯಾಪ್ಟನ್​ ಕೂಲ್'​. ತದನಂತರ ಧೋನಿ ಅವರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ 4 ಕೋಟಿ ರೂ.ಗೆ ಖರೀದಿಸಿದ ಸಿಎಸ್​ಕೆ, ಅವರನ್ನೇ ತಂಡದ ಕ್ಯಾಪ್ಟನ್ ಆಗಿ ಆಡಿಸಲು ಇಚ್ಛಿಸಿತು. ಅಂದು ಸಾಧಾರಣ ಮೊತ್ತಕ್ಕೆ ಚೆನ್ನೈ ಪಾಲಾದ ಧೋನಿ, ಇಂದು ಅಭಿಮಾನಿಗಳು ಸಂಭ್ರಮಿಸುವ ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ. ಪಸ್ತುತ 43ನೇ ವಯಸ್ಸಿನಲ್ಲಿಯೂ ಐಪಿಎಲ್​ 2025ರ ಲೀಗ್​ನಲ್ಲಿ ಆಡಲು ಮುಂದಾಗಿರುವ ಮಾಹಿ, ಫ್ಯಾನ್ಸ್​ಗಳಿಗೆ ಹಾಗೂ ತಂಡಕ್ಕೆ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರಾ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net