ಸಂಗೂರ ಬ್ಯಾರೇಜ್ ಸೋರಿಕೆಗೆ ಬ್ರೇಕ್; ಶಾಶ್ವತ ದುರಸ್ತಿಗೆ 2 ಕೋಟಿ ರೂ. ಯೋಜನೆಗೆ ಸಿದ್ಧತೆ; ವಿಜಯವಾಣಿ ವರದಿ ಪರಿಣಾಮ

9 HVR 4
Published on

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್‌ನಲ್ಲಿ ನೀರು ಸೋರಿಕೆ ಸಮಸ್ಯೆಗೆ ಸಣ್ಣ ನೀರಾವರಿ ಇಲಾಖೆ ಸದ್ಯಕ್ಕೆ ತಾತ್ಕಾಲಿಕ ಪರಿಹಾರ ಒದಗಿಸಿದೆ. ಶಾಶ್ವತ ಸಮಸ್ಯೆ ಪರಹಾರಕ್ಕಾಗಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಫೈಬರ್ ಗೇಟ್ ಅಳವಡಿಕೆ, ತಡೆಗೋಡೆ ನಿರ್ಮಾಣ, ಸೇರಿ ಇತರ ಕಾಮಗಾರಿಗಳಿಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿದೆ.

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆಯ ಧಾರವಾಡ ವಿಭಾಗದ ಅಧೀಕ್ಷಕ ಇಂಜಿನಿಯರ್ ಸತೀಶ, ಇಇ ದೇವರಾಜ, ಎಇ ರೇವಣೆಪ್ಪ ಟಿ.ಆರ್., ಎಇಇ ರವೀಶ ಆರಾಧ್ಯಮಠ ಪರಿಶೀಲನೆ ನಡೆಸಿದರು. ತಾತ್ಕಾಲಿಕವಾಗಿ ಸೋರಿಕೆ ತಡೆಗೆ ಕ್ರಮ ಕೈಗೊಂಡರು.

ಬ್ಯಾರೇಜ್‌ನ ಕಳಪೆ ಕಾಮಗಾರಿ ಕುರಿತು ‘ಸಂಗೂರ ಬ್ಯಾರೇಜ್ ಹೊಸ ಕ್ರಸ್ಟ್ ಗೇಟ್ ಮಾಯ !’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಡಿ.6ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ನೋಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ದುರಸ್ತಿಪಡಿಸಿದ್ದು, ಶಾಶ್ವತ ಪರಿಹಾರಕ್ಕೆ ಸೂಚಿಸಿದ್ದಾರೆ. ಇದಕ್ಕೆ ಕಾರಣವಾದ ‘ವಿಜಯವಾಣಿ’ ತಂಡಕ್ಕೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಅಭಿನಂದನೆ ತಿಳಿಸಿದ್ದಾರೆ.

ಹೊಸ ಗೇಟ್ ಬೇರೆಡೆ ಬಳಕೆ

ಸಂಗೂರ ಬ್ಯಾರೇಜ್‌ಗೆ ಅಳವಡಿಸಿದ್ದ 12 ಹೊಸ ಗೇಟ್‌ಗಳನ್ನು ಇಲಾಖೆಯ ಸೂಚನೆ ಮೇರೆಗೆ ಬೇರೆ ಬ್ಯಾರೇಜ್‌ಗೆ ತುರ್ತು ಕಾಮಗಾರಿಗೆ ಬಳಸಲಾಗಿತ್ತು. ತಾತ್ಕಾಲಿಕವಾಗಿ ಸಂಗೂರ ಬ್ಯಾರೇಜ್‌ನ ನೀರು ಸೋರಿಕೆ ಬಂದ್ ಮಾಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಎಇ ರೇವಣೆಪ್ಪ ಟಿ.ಆರ್. ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net