

MS Dhoni: ಇದೇ ಮಾರ್ಚ್ 22ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ, ಕೌತುಕ ಹೆಚ್ಚಾಗಿದೆ. ಶುರುವಿಗೆ ಇನ್ನೂ 20ಕ್ಕೂ ಹೆಚ್ಚು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಪಂದ್ಯದ ವೇಳಾಪಟ್ಟಿಯೂ ಬಿಡುಗಡೆಯಾಗಿದೆ. ಲೀಗ್ ಆರಂಭದ ಬೆನ್ನಲ್ಲೇ ಆಯಾ ತಂಡಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದು, ಅಭಿಮಾನಿಗಳಲ್ಲಿ ಉತ್ಸಾಹದ ಜತೆಗೆ ಗೊಂದಲವನ್ನು ಸೃಷ್ಟಿಸಿದ್ದಾರೆ.
ಈ ಹಿಂದಿನಿಂದಲೂ ಧೋನಿ ಐಪಿಎಲ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯೇ ಅವರ ಕೊನೆ ಎಂದು ಹೇಳಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ಧೋನಿ ಇನ್ನೂ ಸ್ಪಷ್ಟವಾಗಿ ಏನು ಹೇಳಿಲ್ಲ. ಅವರು ಭಾಗಿಯಾದ ಕೆಲವು ಸಂದರ್ಶನಗಳನ್ನು ನೋಡಿದಾಗ ಇನ್ನೂ ಒಂದೆರೆಡು ವರ್ಷಗಳ ಕಾಲ ಅವರು ಸಿಎಸ್ಕೆ ಪರ ಆಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಅವರ ತರಬೇತಿ, ಭರವಸೆಯ ಮಾತುಗಳು ಸಾಕ್ಷಿಯಾಗಿವೆ. ಇಷ್ಟಾದರೂ ಸಹ ಅಭಿಮಾನಿಗಳಲ್ಲಿ ಅವರ ನಿವೃತ್ತಿ ಬಗ್ಗೆ ಇಂದಿಗೂ ತೀವ್ರ ಗೊಂದಲವಿದೆ ಎನ್ನುವುದಕ್ಕೆ ಈ ಘಟನೆಯೂ ಒಂದು ಸಾಕ್ಷಿ.
ನಿವೃತ್ತಿ ವದಂತಿಗಳ ಹರಿದಾಡುವಿಕೆ ಬೆನ್ನಲ್ಲೇ ನಿನ್ನೆ (ಫೆ.26) ಧೋನಿ ಅವರು ಚೆನ್ನೈಗೆ ಆಗಮಿಸಿದರು. ಬಿಗಿ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಬಂದ ಧೋನಿ, ಅಭಿಮಾನಿಗಳು ಮತ್ತು ಕ್ಯಾಮರಾಗಳತ್ತ ಕೈಬೀಸಿದರು. ಈ ವೇಳೆ ಕಪ್ಪು ಟಿ-ಶರ್ಟ್ ಧರಿಸಿದ್ದ ಧೋನಿ, ಬಹಳ ಸ್ಟೈಲಿಶ್ ಆಗಿ ಕಾಣಿಸಿದ್ದು ನೋಡುಗರ ಗಮನ ಸೆಳೆಯಿತು. ಇಲ್ಲಿ ಅವರು ಧರಿಸಿದ್ದ ಕಪ್ಪು ಅಂಗಿಯಲ್ಲಿ ಬರೆಯಲಾಗಿದ್ದ ಅಕ್ಷರಗಳನ್ನು ತೀರ ಸೂಕ್ಷ್ಮವಾಗಿ ಗಮನಿಸಿದ ಫ್ಯಾನ್ಸ್ಗಳಿಗೆ ಅವರ ನಿವೃತ್ತಿ ಬಗ್ಗೆ ಮತ್ತೆ ಗೊಂದಲ ಭುಗಿಲೆದ್ದಿದೆ. ಇದೇ ಅವರ ಕೊನೆಯ ಐಪಿಎಲ್ ಎಂದು ಚರ್ಚಿಸುವಂತೆ ಮಾಡಿದೆ.
ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯಕ್ಕಾಗಿ ತರಬೇತಿ ನಡೆಸಲು ಅಖಾಡಕ್ಕಿಳಿಯಲು ಸಜ್ಜಾಗಿರುವ ಕ್ಯಾಪ್ಟನ್ ಕೂಲ್ ಧರಿಸಿದ್ದ ಕಪ್ಪು ಟಿ-ಶರ್ಟ್ ಮತ್ತು ಅದರಲ್ಲಿನ ಅಕ್ಷರಗಳೇ ಇದೀಗ ಫ್ಯಾನ್ಸ್ಗಳಲ್ಲಿ ಗೊಂದಲ ಹುಟ್ಟುಹಾಕಿದೆ. ಕೋಡೆಡ್ ಸಂದೇಶ ಇರುವುದನ್ನು ಗಮನಿಸಿದ ಅಭಿಮಾನಿಗಳು, ಇದನ್ನು ಮೋರ್ಸ್ ಕೋಡ್‌ನಲ್ಲಿ ಬರೆಯಲಾಗಿದೆ ಎಂದು ಡಿಕೋಡ್ ಮಾಡಿದ್ದಾರೆ. ಚುಕ್ಕೆಗಳು ಮತ್ತು ಡ್ಯಾಶ್‌ಗಳ ಸರಣಿಯನ್ನು ಒಳಗೊಂಡಿರುವ ಪ್ರಿಂಟಿಂಗ್ನಲ್ಲಿ "ಒನ್ ಲಾಸ್ಟ್ ಟೈಮ್" ಎಂಬ ಅರ್ಥವನ್ನು ಕಂಡುಕೊಂಡಿದ್ದಾರೆ. ಸದ್ಯ ಇದೇ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).