ವ್ಯಾಲೆಂಟೈನ್ಸ್​ ಡೇಗೆ ಸೆಕೆಂಡ್​ ಹ್ಯಾಂಡ್ ಗಿಫ್ಟ್​ ಕೊಟ್ಟಿದ್ದಾರೆಂದು ಕಾರನ್ನು ಕಸದ ಬುಟ್ಟಿಗೆ ಎಸೆದ ಪತ್ನಿ; ವಿಡಿಯೋ ವೈರಲ್​ ಆಗುತ್ತಿದ್ದಂತೆ ಬೆಳಕಿಗೆ ಬಂತು ಅಸಲಿ ಸಂಗತಿ

Porsche Car
Published on

ಮಾಸ್ಕೋ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ನಮ್ಮ ಹಿರಿಯರು ನಮ್ಮ ಸುಮ್ಮನೇ ಹೇಳಿಲ್ಲ. ಆದರೆ, ಜಗಳದ ಸಮಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಹಿತಕರ ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಪತಿಯ ಮೇಲಿನ ಸಿಟ್ಟಿಗೆ ದುಬಾರಿ ಬೆಲೆಯ ಕಾರನ್ನು ಕಸದ ಕಂಟೈನರ್​ಗೆ ಎಸೆದಿರುವ ಘಟನೆ ರಷ್ಯಾದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಈ ನಡೆ ಚರ್ಚಾಸ್ಪದವಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ವ್ಯಕ್ತಿಯೊಬ್ಬರು ಪ್ರೇಮಿಗಳ ದಿನದಂದು ತಮ್ಮ ಪತ್ನಿಗೆ 27 ಲಕ್ಷ ರೂ. ಬೆಲೆಬಾಳುವ ಪೋರ್ಶೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಇದು ಸೆಕೆಂಡ್ ಹ್ಯಾಂಡ್ ಎಂಬ ಕಾರಣಕ್ಕೆ ಮಹಿಳೆ ಅದನ್ನು ರಿಜೆಕ್ಟ್ ಮಾಡಿದ್ದು, ಕಾರನ್ನು ಧ್ವಂಸ ಮಾಡಿ ಅದನ್ನು ಕಸದ ಕಂಟೈನರ್​ಗೆ ಎಸೆದಿರುವುದಾಗಿ ವರದಿಯಾಗಿದೆ.

ಆದರೆ, ಖಾಸಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ಬ್ಲಾಗರ್​ಗಳು ಕೆಂಟೆಂಟ್​ಗಾಗಿ ಕಾರನ್ನು ಬಳಸಿಕೊಂಡಿದ್ದು, ಬಳಿಕ ಕಸದ ಕಂಟೈನರ್​ಗೆ ಎಸೆದಿದ್ದಾರೆ. ಕಾರಿನ ಹೆಡ್​ಲೈಟ್ ಹಾಗೂ ನಂಬರ್ ಪ್ಲೇಟ್ ಎರಡು ಕೂಡ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ಅದನ್ನು ಕಂಟೆಂಟ್​ಗಾಗಿ ಬಳಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯರೊಬ್ಬರು, ಸುಮಾರು ಎರಡು ವಾರಗಳಿಂದ ಆ ಕಾರು ಅಲ್ಲಿಯೇ ಇದೆ. ಸ್ಥಳೀಯ ನಿವಾಸಿಗಳು ಆ ಕಾರಿನ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಆ ಕಾರಿನ ಮಾಲೀಕ ಮತ್ತೆ ಆ ಕಾರನ್ನು ಮನೆಯಂಗಳದಲ್ಲಿ ಇರಿಸುತ್ತಾನೋ ಅಥವಾ ಮಾರಾಟ ಮಾಡುತ್ತಾನೋ ಎಂಬುದು ತಿಳಿದುಬಂದಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net