

ಜೈಪುರ: ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಬಿಜೆಪಿ (BJP) ನಾಯಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ರಾಜಸ್ಥಾನದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಕರಿಬ್ಬರ ಈ ಕಿತ್ತಾಟ ನಗೆಪಾಟಲಿಗೀಡಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಇಬ್ಬರು ನಾಯಕರು ಪರಸ್ಪರ ಕೊರಳ ಪಟ್ಟಿಯನ್ನು ಹಿಡಿದುಕೊಂಡಿದ್ದು, ಆರೋಪ-ಪ್ರತ್ಯಾರೋಪ ಮಾಡುತ್ತ ಹೊಡೆದಾಡಿಕೊಳ್ಳುತ್ತಿದ್ದು, ಅಲ್ಲಿದ್ದ ಕಾರ್ಯಕರ್ತರು ಮಧ್ಯಪ್ರವೇಶಿಸಿ ಇವರಿಬ್ಬರ ಜಗಳವನ್ನು ಬಿಡಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿ (BJP) ರಾಜ್ಯಾಧ್ಯಕ್ಷ ಮದನ್ ರಾಥೋಡ್ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಪದಾಧಿಕಾರಿಯೊಬ್ಬರು ಹಾಲಿ ಪದಾಧಿಕಾರಿಯ ನಡುವೆ ಜಗಳವಾಗಿರುವುದಾಗಿ ವರದಿಯಾಗಿದೆ.
ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಪದಾಧಿಕಾರಿ ಜಾಕಿ ರಾಜ್ಯಾಧ್ಯಕ್ಷರನ್ನು ವೇದಿಕೆಗೆ ಕರೆದೊಯ್ದರು. ಈ ವೇಳೆ ಹಾಲಿ ಪದಾಧಿಕಾರಿ ಜಾವೇದ್ ಖುರೇಷಿ ಅವರನ್ನು ತಡೆದಿದ್ದು, ಈ ವಿಚಾರವಾಗಿ ಈ ಇಬ್ಬರು ನಾಯಕರು ಹೊಡೆದಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರಾಜ್ಯಾಧ್ಯಕ್ಷರ ಮುಂದೆಯೇ ಈ ಹೊಡೆದಾಟ ನಡೆದಿದ್ದು, ಪಕ್ಷದಲ್ಲಿನ ಆಂತರಿಕ ಬಂಡಾಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.