

ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದ್ದು, ಆತಿಥೆಯರಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ.
ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಈ ಪಂದ್ಯವು ಮಳೆಯಿಂದಾಗಿ ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ರದ್ದಾಗಿದ್ದು, ಉಭಯ ತಂಡಗಳು ಗೆಲ್ಲಲು ಇದ್ದ ಕೊನೆಯ ಅವಕಾಶವನ್ನು ಕಳೆದುಕೊಂಡಿದ್ದು, ಚಾಂಪಿಯನ್ಸ್ ಟ್ರೋಫಿ (Champions Trophy) ಅಭಿಯಾನವನ್ನು ಮುಗಿಸಿವೆ.
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನವು 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸಿದ್ದು, ಆತಿಥೇಯ ರಾಷ್ಟ್ರವು ಅಭಿಯಾನ ಶುರುವಾದ ಒಂದು ವಾರಕ್ಕೆ ತನ್ನ ಪ್ರಯಾಣವನ್ನು ಮುಗಿಸಿದೆ. ಗೆಲ್ಲಲು ಇದ್ದ ಕೊನೆಯ ಅವಕಾಶವನ್ನು ಮಳೆ ಕಸಿದುಕೊಂಡಿದ್ದು, ಉಭಯ ತಂಡಗಳಿಗೂ ಭಾರೀ ಮುಖಭಂಗವನ್ನುಂಟು ಮಾಡಿದೆ.
ಗ್ರೂಪ್ ಎ ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡವು ಆಡಿರುವ ಮೊದಲೆರಡು ಪಂದ್ಯದಲ್ಲಿ ಸೋಲುಂಡಿದ್ದು, ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಈ ಪಂದ್ಯ ನಡೆದಿದ್ದರೂ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಆದರೆ, ಗೆಲುವಿನೊಂದಿಗೆ ಅಭಿಯಾನವನ್ನು ಅಂತ್ಯಗೊಳಿಸಲು ಉಭಯ ತಂಡಗಳು ಸಜ್ಜಾಗಿದ್ದವು.
ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕ ಪಡೆದುಕೊಂಡು ಟೂರ್ನಿಗೆ ವಿದಾಯ ಹೇಳಿವೆ. ಬಾಂಗ್ಲಾದೇಶ ತಂಡ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ಇತ್ತ ಪಾಕಿಸ್ತಾನ -1.09 ನೆಟ್ ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.