IPL 2024: ಬಾಲ್ಯ ಸ್ನೇಹಿತನ ಅಂಗಡಿ ಹೆಸರಿನ ಬ್ಯಾಟ್​ ಬಳಸಿದ 'ಕ್ಯಾಪ್ಟನ್ ಕೂಲ್'​! ಫ್ಯಾನ್ಸ್​ ಸಂತಸ

Untitled design (33)
Published on

ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್ ಧೋನಿ ಇದೀಗ 2024ರ ಐಪಿಎಲ್​ ಟೂರ್ನಿಗೆ ಸಕಲ ತಯಾರಿಗಳನ್ನು ನಡೆಸುತ್ತಿದ್ದು, 42ರ ವಯಸ್ಸಿನಲ್ಲೂ ಕ್ರೀಡಾಂಗಣಕ್ಕೆ ಇಳಿದು ತರಬೇತಿ ನಡೆಸುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಕಳೆದ ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಟ್ರೋಫಿ ತಂದುಕೊಟ್ಟ ಧೋನಿ, ಮುಂಬರುವ ವರ್ಷ ಆಡಲಿದ್ದಾರಾ ಎಂಬ ಗೊಂದಲ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿ ಕಾಡುತ್ತಿತ್ತು. ಯಾರಿಗೂ ನಿರಾಸೆ ಮಾಡದ ಎಂಎಸ್​ಡಿ, ಇದೀಗ ಹೊಚ್ಚ ಹೊಸ ಲುಕ್​ನಲ್ಲಿ ಮರಳಿದ್ದಾರೆ.

ನೆಟ್ಸ್​ನಲ್ಲಿ ಪ್ರಾಕ್ಟಿಸ್​ ಶುರು ಮಾಡಿರುವ ಧೋನಿ, ಹೊಸ ಬ್ಯಾಟ್​ನೊಂದಿಗೆ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋದ ಪ್ರಕಾರ, ಧೋನಿ ಹಿಡಿದಿರುವ ಬ್ಯಾಟ್​ ಮೇಲಿನ ಸ್ಟಿಕರ್, ಅವರ ಬಾಲ್ಯ ಸ್ನೇಹಿತನ ಅಂಗಡಿಯ ಹೆಸರು ಎಂಬುದು ವಿಶೇಷ. ತಮ್ಮ ಕರಿಯರ್​ಗೆ ಸಹಾಯ ಮಾಡಿದ್ದ ಬಾಲ್ಯದ ಗೆಳೆಯನ ಅಂಗಡಿಯ ಹೆಸರಿನ ಸ್ಟಿಕ್ಕರ್‌ನೊಂದಿಗೆ ಈ ಬಾರಿ ಐಪಿಎಲ್​ನಲ್ಲಿ ಕ್ಯಾಪ್ಟನ್ ಕೂಲ್ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಈ ವಿಷಯ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಸಂತಸ ಮೂಡಿಸಿದ್ದು, ಗೆಳೆಯನ ಅಂಗಡಿಯ ಸ್ಟಿಕರ್​ ಇರುವ ಬ್ಯಾಟ್​ ಹಿಡಿದೇ ಧೋನಿ ಈ ಸೀಸನ್​ ಪೂರ ಆಡಲಿದ್ದಾರೆ ಎನ್ನಲಾಗಿದೆ. ಪ್ರೈಮ್ ಸ್ಪೋರ್ಟ್ಸ್ ಎಂಬುದು ಅವರ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ ಒಡೆತನದ ಅಂಗಡಿಯಾಗಿದೆ. ಪರಮ್‌ಜಿತ್ ಧೋನಿ ಕ್ರಿಕೆಟ್ ಪಯಣಕ್ಕೆ ಕಾಲಿಟ್ಟಾಗ ಆರಂಭದ ದಿನಗಳಲ್ಲಿ ಮಾಡಿದ ಸಹಾಯ ಮಹತ್ವವಾದದ್ದು, ಅದನ್ನು ಎಂ.ಎಸ್​. ಧೋನಿ ಬಯೋಪಿಕ್ ಸಿನಿಮಾದಲ್ಲಿ ಸಹ ಕಾಣಬಹುದಾಗಿದೆ.

ಇದೀಗ ಪರಮ್‌ಜಿತ್ ಸಿಂಗ್ ಅಂಗಡಿಯ ಸ್ಟಿಕರ್ ಇರುವ ಬ್ಯಾಟ್​ನಲ್ಲಿ ಧೋನಿ ಅಭ್ಯಾಸ ಮಾಡುತ್ತಿರುವ ಒಂದೆರಡು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net