

ನವದೆಹಲಿ: ಆಕ್ರಮಣಕಾರಿ ಬಾಜ್ಬಾಲ್ ತಂತ್ರಗಾರಿಕೆಯ ಮೂಲಕ ಭಾರತ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡ 2ನೇ ಟೆಸ್ಟ್ನಲ್ಲಿ ಆತಿಥೇಯರ ತಿರುಗೇಟಿಗೆ ಶರಣಾಗಿದೆ. ಇದೀಗ ಮೂರನೇ ಟೆಸ್ಟ್ ವೇಳೆಗೆ ಬಾಜ್ಬಾಲ್ ತಂತ್ರಗಾರಿಕೆಯಲ್ಲಿ ಇನ್ನಷ್ಟು ಆಕ್ರಮಣವನ್ನು ತುಂಬವ ಎಚ್ಚರಿಕೆಯನ್ನು ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಂ ನೀಡಿದ್ದಾರೆ.
ವಿಶಾಖಪಟ್ಟಣದಲ್ಲಿ ಸೋಮವಾರ 2ನೇ ಟೆಸ್ಟ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್ ತಂಡ ವಿಶ್ರಾಂತಿಗಾಗಿ ಅಬುಧಾಬಿಗೆ ಹಾರಿದ್ದು, ಫೆಬ್ರವರಿ 15ರಿಂದ ರಾಜ್ಕೋಟ್ನಲ್ಲಿ ನಡೆಯಲಿರುವ 3ನೇ ಟೆಸ್ಟ್ಗೆ ಮುನ್ನ ಫೆಬ್ರವರಿ 12ರಂದು ಭಾರತಕ್ಕೆ ಮರಳಲಿದೆ. ಅಬುಧಾಬಿಯಲ್ಲಿ ಇಂಗ್ಲೆಂಡ್ ಆಟಗಾರರು ಯಾವುದೇ ಅಭ್ಯಾಸ ನಡೆಸುವುದಿಲ್ಲ. ಹೀಗಾಗಿ ಅವರು ತಮ್ಮ ಕ್ರಿಕೆಟ್ ಕಿಟ್ ಕೂಡ ತೆಗೆದುಕೊಂಡು ಹೋಗಿಲ್ಲ ಎನ್ನಲಾಗಿದೆ.
"ಸರಣಿ ಈಗ 1-1 ಸಮಬಲದಲ್ಲಿದೆ. ಹೀಗಾಗಿ ನಾವಿನ್ನೂ ಸ್ಪರ್ಧೆಯಲ್ಲಿರುವುದನ್ನು ಇದು ತೋರಿಸುತ್ತಿದೆ. ಕಳೆದೆರಡು ಟೆಸ್ಟ್ಗಳಲ್ಲಿ ನಾವು ಉತ್ತಮ ಆಟವನ್ನೇ ಆಡಿದ್ದೇವೆ. ಸರಣಿಯಲ್ಲಿ ಇನ್ನೂ 3 ಪಂದ್ಯಗಳಿದ್ದು, ನಮ್ಮ ರನ್ಗಳಿಕೆಯ ವೇಗ ಇನ್ನಷ್ಟು ಹೆಚ್ಚಬಹುದು' ಎಂದು ಮೆಕ್ಕಲಂ ಹೇಳಿದ್ದಾರೆ.
ಲಾರೆನ್ಸ್ ಐಎಲ್ಟಿ20ಯಲ್ಲಿ ಕಣಕ್ಕೆ
ಇಂಗ್ಲೆಂಡ್ ತಂಡ ಬ್ಯಾಟರ್ ಡೇನ್ ಲಾರೆನ್ಸ್ ಮಾತ್ರ ಈ ಬಿಡುವಿನ ಅವಧಿಯಲ್ಲಿ ಅಬುಧಾಬಿಯಲ್ಲಿ ಇಂಟರ್ನ್ಯಾಷನಲ್ ಲೀಗ್ ಟಿ20 (ಐಎಲ್ಟಿ20) ಟೂರ್ನಿಯಲ್ಲಿ ಡೆಸರ್ಟ್ ವೈಪರ್ಸ್ ಪರ 2 ಪಂದ್ಯಗಳನ್ನು ಆಡಲಿದ್ದಾರೆ. ಹ್ಯಾರಿ ಬ್ರೂಕ್ ಪ್ರವಾಸದಿಂದ ದಿಢೀರ್ ಹೊರಗುಳಿದಾಗ ಲಾರೆನ್ಸ್ ಕೊನೇಕ್ಷಣದಲ್ಲಿ ಇಂಗ್ಲೆಂಡ್ ತಂಡ ಸೇರಿದ್ದರು. ಹೀಗಾಗಿ ಅವರು ಐಎಲ್ಟಿ20ಯಲ್ಲಿ ಆಡುವ ಒಪ್ಪಂದವನ್ನು ಬ್ರೇಕ್ಮಾಡಿ ಭಾರತಕ್ಕೆ ಆಗಮಿಸಿದ್ದರು.
ಬಾಜ್ಬಾಲ್ಗೆ ಬಾಯ್ಕಾಟ್ ಟೀಕೆ
ಮೆಕ್ಕಲಂ-ಸ್ಟೋಕ್ಸ್ ಟೀಮ್ನ ಬಾಜ್ಬಾಲ್ ತಂತ್ರಗಾರಿಕೆಗೆ ಇಂಗ್ಲೆಂಡ್ ಮಾಜಿ ನಾಯಕ ಹಾಗೂ ವಿಶ್ಲೇಷಕ ಜೆಫ್ರಿ ಬಾಯ್ಕಾಟ್ರಿಂದ ಟೀಕೆ ವ್ಯಕ್ತವಾಗಿದೆ. ಓವರ್ಗೆ 5ರಂತೆ ರನ್ ಗಳಿಸುವುದು ಟೆಸ್ಟ್ ಕ್ರಿಕೆಟ್ನಲ್ಲೂ ಮನರಂಜನೆ ಒದಗಿಸಬಹುದಾದರೂ, ಅದರಿಂದ ಬ್ಯಾಟರ್ ಒಬ್ಬ ತನಗೆ ಸಿಕ್ಕ ಉತ್ತಮ ಆರಂಭದ ನಡುವೆಯೂ ವಿಕೆಟ್ ಕೈಚೆಲ್ಲಬಹುದು. ಬಾಜ್ಬಾಲ್ನಿಂದ ಜೋ ರೂಟ್ ವಿಕೆಟ್ ನಷ್ಟವಾಗುತ್ತಿದೆ. ಅವರ ತಲೆಯಲ್ಲಿ ಟಿ20 ಕ್ರಿಕೆಟ್ ಇದ್ದಂತಿದೆ. ಹೀಗಾಗಿ ಸ್ವೀಪ್, ರಿವರ್ಸ್ ಸ್ವೀಪ್ ಹೇಗಾದರೂ ಸರಿ ಪ್ರತಿ ಎಸೆತದಲ್ಲೂ ರನ್ ಗಳಿಸಲು ಬಯಸುತ್ತಿದ್ದಾರೆ. ಆದರೆ ಆಕ್ರಮಣಕಾರಿ ಆಟಕ್ಕಿಂತ ಇನಿಂಗ್ಸ್ ಕಟ್ಟುವುದು ಮುಖ್ಯವಾದುದು ಎಂದು ಬಾಯ್ಕಾಟ್ ದೂರಿದ್ದಾರೆ.