

ವಿಶಾಖಪಟ್ಟಣ: ಭಾರತ ತಂಡ 2ನೇ ಟೆಸ್ಟ್ನಲ್ಲಿ ಗೆಲುವು ದಾಖಲಿಸುವಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಕೆಟ್ ಪತನ ಪ್ರಮುಖ ಪಾತ್ರವಲಿಸಿತು. 4ನೇ ದಿನ ಭೋಜನ ವಿರಾಮದ ಬಳಿಕ ಆಂಗ್ಲರ ಚೇಸಿಂಗ್ಗೆ ನಾಯಕ ಬೆನ್ ಸ್ಟೋಕ್ಸ್ ಆಸರೆಯಾಗಿದ್ದರು. ಫೋಕ್ಸ್ ಜತೆ ಸ್ಟೋಕ್ಸ್ 20 ರನ್ ಸೇರಿಸಿದಾಗ ಶ್ರೇಯಸ್ ಅಯ್ಯರ್ ಭಾರತದ ಜಯದ ಹಾದಿ ಸುಲಭಗೊಳಿಸಿದರು. ಜತೆಗೆ ಸೇಡು ತೀರಿಸಿಕೊಂಡ ಸಂಭ್ರಮವನ್ನೂ ಕಂಡರು.
ಸಿಂಗಲ್ಸ್ ಕಸಿದು ಸ್ಟ್ರೈಕ್ಗೆ ಬರಲು ಯತ್ನಿಸಿದ ಸ್ಟೋಕ್ಸ್, ಶ್ರೇಯಸ್ರ ಡೈರೆಕ್ಟ್ ಹಿಟ್ಗೆ ರನೌಟಾದರು. ಆಗ ಇನ್ನೂ 179 ರನ್ ಬೇಕಿದ್ದರಿಂದ ಇಂಗ್ಲೆಂಡ್ ಜಯದ ಆಸೆ ಕೈಚೆಲ್ಲುವಂತಾಯಿತು. ಭಾರತದ 2ನೇ ಇನಿಂಗ್ಸ್ನಲ್ಲಿ ಲಾಂಗ್ಆಫ್ ಕಡೆಗೆ ಓಡಿಬಂದು ಅದ್ಭುತ ರೀತಿಯಲ್ಲಿ ಹಾರಿ ಕ್ಯಾಚ್ ಹಿಡಿದಿದ್ದ ಸ್ಟೋಕ್ಸ್, ತೋರು ಬೆರಳನ್ನು ತೋರಿಸಿ ಶ್ರೇಯಸ್ ಔಟಾಗಿದ್ದನ್ನು ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೇಯಸ್ ಕೂಡ ಸ್ಟೋಕ್ಸ್ರನ್ನು ರನೌಟ್ ಮಾಡಿದ ಬಳಿಕ ತೋರು ಬೆರಳು ತೋರಿಸಿ ಸಂಭ್ರಮಿಸುವ ಮೂಲಕ ಸೇಡು ತೀರಿಸಿಕೊಂಡರು.
ಇದು ಕ್ರಿಕೆಟ್ ಪ್ರೇಮಿಗಳಿಗೆ ಗಂಗೂಲಿ-ಫ್ಲಿಂಟಾಫ್ ಜಟಾಪಟಿಯನ್ನು ನೆನಪಿಸಿತು. ಭಾರತದಲ್ಲಿ ಸರಣಿ ಸಮಬಲ ಸಾಧಿಸಿದಾಗ ಇಂಗ್ಲೆಂಡ್ ಆಲ್ರೌಂಡರ್ ಆಂಡ್ರೋ ಫ್ಲಿಂಟಾಫ್ ಅಂಗಿ ಬಿಚ್ಚಿ ಸಂಭ್ರಮಿಸಿದ್ದರೆ, ಇದಕ್ಕೆ ಪ್ರತೀಕಾರವಾಗಿ ಆಗಿ ನಾಯಕ ಸೌರವ್ ಗಂಗೂಲಿ ಭಾರತ ತಂಡ ನಾಟ್ವೆಸ್ಟ್ ಸರಣಿಯ ಫೈನಲ್ನಲ್ಲಿ ಗೆದ್ದಾಗ ಲಂಡನ್ನ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಜೆರ್ಸಿ ಬಿಚ್ಚಿ ಸಂಭ್ರಮಿಸಿದ್ದರು.