

ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಜುಲೈ 07ರಂದು 43ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಜೊತೆ ಸರಳವಾಗಿಯೇ ಆಚರಿಸಿಕೊಂಡಿದ್ದಾರೆ. ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದ ನಿಮಿತ್ತ ಮುಂಬೈನಲ್ಲಿರುವ ಧೋನಿ ಅವರನ್ನು ಖುದ್ದು ಭೇಟಿ ಮಾಡಿ ಸಲ್ಮಾನ್ ಖಾನ್ ಶುಭಾಶಯ ಕೋರಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಧೋನಿಯ ಜನ್ಮದಿನವನ್ನು ಸಾಕ್ಷಿ ಸಖತ್ ಆಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಕೇಕ್ ಕಟ್ಟಿಂಗ್ ಬಳಿಕ ಸಾಕ್ಷಿ ಧೋನಿ ಪಾದ ಮುಟ್ಟಿ ನಮಸ್ಕರಿಸಿದ್ದು, ಧೋನಿಯು ಗೆದ್ದು ಬಾ ಎನ್ನುವ ಮೂಲಕ ಪತ್ನಿಯ ಕಾಲೆಳೆದಿದ್ದಾರೆ. ಪತ-ಪತ್ನಿಯ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ದಂಪತಿ ನಡುವಿನ ಅನ್ಯೋನ್ಯತೆ ಕಂಡು ಕಮೆಂಟ್ ಮಾಡುತ್ತಿದ್ದಾರೆ.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಸಂಗೀತ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹೇಂದ್ರ ಸಿಂಗ್ ಧೋನಿ ದಂಪತಿಗಳು ಮುಂಬೈಗೆ ಬಂದಿಳಿದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧೋನಿ ಸಲ್ಮಾನ್ ಖಾನ್, ರಣವೀರ್ ಸಿಂಗ್ ಜೊತೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ಬಳಿಕ ನಡೆದ ಧೋನಿ ಬರ್ತಡೇ ಬ್ಯಾಶ್ನಲ್ಲಿ ಸಲ್ಮಾನ್ ಖಾನ್ ಕೂಡ ಪಾಲ್ಗೊಂಡು ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಪೋಸ್ಟ್ ಮಾಡಿರುವ ಸಲ್ಮಾನ್ ಹ್ಯಾಪಿ ಬರ್ತ್ಡೇ ಕಪ್ತಾನ್ ಸಾಬ್ ಎಂದು ಬರೆದುಕೊಂಡಿದ್ದಾರೆ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಮುಂದುವರೆದಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಸಿಎಸ್ಕೆ ತಂಡದ ನಾಯಕತ್ವ ತ್ಯಜಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಸಿಎಸ್ಕೆ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದು, 18ನೇ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಆಡಲಿದ್ದಾರಾ ಅಥವಾ ನಿವೃತ್ತಿ ಘೋಷಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.