ಎಲ್ಲಾ ಫೈನಲ್​ ಪಂದ್ಯಗಳನ್ನು ವಾಂಖೆಡೆಯಲ್ಲಿ ನಡೆಸಲು ಸಾಧ್ಯವಿಲ್ಲ; ಆದಿತ್ಯ ಠಾಕ್ರೆ ಹೇಳಿಕೆಗೆ ಖಡಕ್​ ತಿರುಗೇಟು ನೀಡಿದ ಬಿಸಿಸಿಐ

Aditya Shukla
Published on

ಮುಂಬೈ: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ವಿಶ್ವವಿಜೇತರಿಗೆ ಭಾರತೀಯರು ಭವ್ಯ ಸ್ವಾಗತ ನೀಡಿದ್ದಾರೆ. ಮುಂಬೈನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಅಭಿಮಾನಿಗಳು ಕಪ್​ ಗೆಲುವನ್ನು ಸ್ಮರಣೀಯವಾಗಿಸಿದ್ದು, ಹೊಸ ದಾಖಲೆ ಒಂದು ನಿರ್ಮಾಣವಾಗಿದೆ.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಆದಿತ್ಯ ಠಾಕ್ರೆ, ಮುಂಬೈನಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡಕ್ಕೆ ಭವ್ಯ ಸ್ವಾಗತ ನೀಡಿರುವುದು ಬಿಸಿಸಿಐಗೆ ಯಾವುದೇ ಪ್ರಮುಖ ಟೂರ್ನಿಯ ಫೈನಲ್ ಪಂದ್ಯವನ್ನು ದೇಶದ ಆರ್ಥಿಕ ರಾಜಧಾನಿಯಿಂದ ಎಂದಿಗೂ ಕಸಿದುಕೊಳ್ಳಬಾರದು ಎಂಬ ಸಂದೇಶವಾಗಿದೆ. ಮುಂಬೈನಲ್ಲಿ ನಡೆದ ಸಂಭ್ರಮಾಚರಣೆಯು ವಿಶ್ವಕಪ್ ಫೈನಲ್ ಅನ್ನು ಎಂದಿಗೂ ಕಸಿದುಕೊಳ್ಳದಂತೆ ಬಿಸಿಸಿಐಗೆ ಬಲವಾದ ಸಂದೇಶವಾಗಿದೆ ಎಂದು ಬರೆದುಕೊಂಡಿದ್ದರು.

ಇದ್ಕಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ, 1987ರ ವಿಶ್ವಕಪ್‌ನ ಫೈನಲ್ ಪಂದ್ಯವೂ ಕೋಲ್ಕತ್ತಾದಲ್ಲಿ ನಡೆದಿದ್ದು, ಕೋಲ್ಕತ್ತಾವನ್ನು ಭಾರತದಲ್ಲಿ ಕ್ರಿಕೆಟ್‌ನ ಮೆಕ್ಕಾ ಎಂದು ಕರೆಯಲಾಗುತ್ತದೆ. ಆದ್ದರಿಂದ, ಅಂತಿಮ ಪಂದ್ಯವನ್ನು ನಿರ್ದಿಷ್ಟ ನಗರದಲ್ಲಿ ಮಾತ್ರ ನಡೆಸಬೇಕು ಎಂದು ನಿರ್ಧರಿಸಲಾಗುವುದಿಲ್ಲ. ಮುಂಬೈನಲ್ಲಿ ಹಲವು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆದಿವೆ. ಅಲ್ಲದೆ, ಅಹಮದಾಬಾದ್ ಮೈದಾನವು 1,30,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನಾವು ಸಾಮರ್ಥ್ಯವನ್ನು ಸಹ ನೋಡಬೇಕಾಗಿದೆ.

ಇಡೆನ್​ ಗಾರ್ಡನ್​ 80 ಸಾವಿರ ಪ್ರೇಕ್ಷಕರನ್ನು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಇತರ ನಗರಗಳಲ್ಲಿಯೂ ಇದೆ ಎಂದರು. ಇಡೀ ದೇಶ ಮತ್ತು ಎಲ್ಲಾ ಕ್ರೀಡಾಂಗಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀವು ಕೇವಲ ಒಂದು ಸ್ಥಳಕ್ಕೆ ಸೀಮಿತವಾಗಿರಬಾರದು. ಮುಂಬೈನ ಜನರು ತಮ್ಮ ಆಟಗಾರರನ್ನು ಸ್ವಾಗತಿಸಲು ನೆರೆದಿರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು. ಮುಂಬೈ ಯಾವಾಗಲೂ ನಮ್ಮ ಆದ್ಯತೆಯಾಗಿದೆ. ಆದರೆ ಫೈನಲ್‌ಗಳನ್ನು ಎಲ್ಲಿ ನಡೆಸಬೇಕು, ಸೆಮಿಫೈನಲ್‌ಗಳನ್ನು ಎಲ್ಲಿ ನಡೆಸಬೇಕು ಎಂಬುದನ್ನು ಬಿಸಿಸಿಐ ನಿರ್ಧರಿಸುತ್ತದೆ.

ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ಮುಂಬೈ ಯಾವಾಗಲೂ ನಮ್ಮ ಆದ್ಯತೆಯ ಪಟ್ಟಿಯಲ್ಲಿದೆ. ಆದರೆ ಎಲ್ಲಾ ಫೈನಲ್‌ಗಳು ಒಂದೇ ನಗರದಲ್ಲಿ ನಡೆಯಬೇಕು ಎಂದು ಹೇಳಲಾಗುತ್ತಿದೆ. ಇದು ಯಾವ ದೇಶ ಹಾಗೂ ಟೂರ್ನಿಯಲ್ಲಿ ನಡೆಯುವುದಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net