

ಚೆನ್ನೈ: ತಮ್ಮ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಒಮ್ಮೆಯಾದರೂ ಐಪಿಎಲ್ ಟ್ರೋಫಿಯನ್ನು ಜಯಿಸಬೇಕೆಂಬುದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಆಸೆಯೊಂದಿಗೆ ಪ್ರತಿಬಾರಿ ಟೂರ್ನಿ ಶುರುವಾದಾಗ ಈ ಸಲ ಕಪ್ ನಮ್ದೆ ಎಂಬ ಘೋಷಣೆಗಳನ್ನು ಅಭಿಮಾನಿಗಳು ಮೊಳಗಿಸುತ್ತಾರೆ. ಆದರೆ, 16 ಆವೃತ್ತಿ ಪೂರ್ಣಗೊಂಡಿದ್ದರು ಅಭಿಮಾನಿಗಳ ಆಸೆ ಮಾತ್ರ ಆಸೆಯಾಗಿಯೇ ಉಳಿದಿದೆ.
ಇನ್ನೂ ಆರ್ಸಿಬಿಗೆ ತದ್ವಿರುದ್ಧವಾಗಿ ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ) ತಂಡ ಐಪಿಎಲ್ನಲ್ಲಿ ಅಧಿಕ ಬಾರಿ ಟ್ರೋಫಿ ಜಯಿಸಿದ ತಂಡವೆನಿಸಿಕೊಂಡಿದೆ. ಅದಕ್ಕೆ ಪ್ರಮುಖ ಕಾರಣ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್ಕೆ ತಂಡದ ಹಾಲಿ ಕ್ಯಾಪ್ಟನ್ ಧೋನಿ ಎಂದರೆ ಉತ್ಪ್ರೇಕ್ಷವಾಗದು. ಆರ್ಸಿಬಿ ಸೇರಿದಂತೆ ಕೆಲವು ತಂಡಗಳು ಈವರೆಗೂ ಒಂದು ಬಾರಿಯೂ ಟ್ರೋಫಿ ಜಯಿಸದ ಉದಾಹರಣೆ ಇದೆ.
ಇತ್ತೀಚೆಗೆ ಧೋನಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆರ್ಸಿಬಿ ಅಭಿಮಾನಿಯೊಬ್ಬ ಆಡಿದ ಮಾತಿಗೆ ಧೋನಿ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ಅವರ ನಾಯಕತ್ವ ಕೌಶಲವನ್ನು ಹೊಗಳಿದ ಆರ್ಸಿಬಿ ಅಭಿಮಾನಿ, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಕಪ್ ಗೆಲ್ಲಲು ಸಹಾಯ ಮಾಡಿ ಎಂದು ಕೇಳಿಕೊಂಡನು.
ಅಭಿಮಾನಿ ಮಾತಿಗೆ ಪ್ರತಿಕ್ರಿಯೆ ನೀಡಿದ ಧೋನಿ, ಆರ್ಸಿಬಿ ಒಂದು ಉತ್ತಮ ತಂಡವೆಂಬುದು ನಿಮಗೆಲ್ಲರಿಗೂ ತಿಳಿದಿದೆ. ನೀವು ಯೋಚಿಸಬೇಕಾದದ್ದು ಏನೆಂದರೆ ಎಲ್ಲವೂ ಯೋಜನೆಯಂತೆಯೇ ನಡೆಯುವುದಿಲ್ಲ. ಐಪಿಎಲ್ನಲ್ಲಿ ಇರುವ ಎಲ್ಲ 10 ತಂಡಗಳು ಕೂಡ ಉತ್ತಮ ಆಟಗಾರರನ್ನು ಒಳಗೊಂಡ ಶಕ್ತಿಶಾಲಿ ತಂಡಗಳಾಗಿವೆ. ಆದರೆ, ಕೆಲವೊಮ್ಮೆ ಗಾಯದ ಸಮಸ್ಯೆಯಿಂದ ಆಟಗಾರರು ಅಲಭ್ಯವಾದಾಗ ಸಮಸ್ಯೆ ಉಂಟಾಗುತ್ತದೆ. ಸದ್ಯಕ್ಕೆ ನನ್ನದೇ ತಂಡದಲ್ಲಿ ನಾನು ಯೋಚಿಸಬೇಕಾದ ಸಾಕಷ್ಟು ಸಂಗತಿಗಳಿವೆ. ನಾನು ಒಂದು ತಂಡದಲ್ಲಿ ಭಾಗಿಯಾಗಿ ಇನ್ನೊಂದು ತಂಡಕ್ಕೆ ಸಹಾಯ ಮಾಡಿದರೆ ನಮ್ಮ ತಂಡದ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಆದರೆ, ಎಲ್ಲ ತಂಡಗಳಿಗೂ ಒಳಿತಾಗಲಿ ಎಂದು ನಾನು ಬಯಸುತ್ತೇನೆ ಎಂದು ಧೋನಿ ಹೇಳಿದ್ದಾರೆ.
ಧೋನಿ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ನಡುವೆ ಮತ್ತೊಂದು ಮಾತುಗಳು ಕೇಳಿಬರುತ್ತಿವೆ. ಅದೇನೆಂದರೆ, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಧೋನಿ, ಪೂರ್ಣ ಪ್ರಮಾಣದಲ್ಲಿ ನಾಯಕತ್ವ ನಿರ್ವಹಣೆ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಇತ್ತೀಚಿನ ಐಪಿಎಲ್ ಹರಾಜಿನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಧೋನಿಯ ಸಿಎಸ್ಕೆ ಉತ್ತರಾಧಿಕಾರಿಗೆ ಬಗ್ಗೆ ಚಿಂತಿಸುತ್ತಿದ್ದೇವೆ. ಆದರೆ, ಧೋನಿ ಅವರು ಯಾವಾಗಲೂ ಹೆಚ್ಚಿನ ಉತ್ಸಾಹದಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದರು. ಧೋನಿ ಬಳಿಕ ರವೀಂದ್ರ ಜಡೇಜಾ ಅವರು ಆ ಸ್ಥಾನ ತುಂಬಲಿದ್ದಾರೆ ಎಂಬ ಮಾತುಗಳು ಸಹ ಕೇಳುಬರುತ್ತಿವೆ. ಆದರೆ, ಇದಕ್ಕೆಲ್ಲ ಉತ್ತರ ಮುಂದೆ ಸಿಗಲಿದೆ. (ಏಜೆನ್ಸೀಸ್)