

ನವದೆಹಲಿ: ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮೊರ್ನೆ ಮೊರ್ಕೆಲ್ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರೇ ಖಚಿತಪಡಿಸಿದ್ದಾರೆ.
ಹೌದು, ಮೊರ್ನೆ ಮೊರ್ಕೆಲ್ ಅವರನ್ನು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಪಿಟಿಐಗೆ ಖಚಿತಪಡಿಸಿದ್ದಾರೆ. ಈಗಾಗಲೇ ಭಾರತ ತಂಡದ ಮುಖ್ಯ ಕೋಚ್ ಆಗಿ ಗಂಭೀರ್ ಅವರನ್ನು ನೇಮಕ ಮಾಡಲಾಗಿದೆ. ಅವರ ಸಲಹೆಯಂತೆ ಮೊರ್ಕೆಲ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂಬ ವದಂತಿ ತಿಂಗಳ ಹಿಂದೆಯೇ ಹರಡಿತ್ತು. ಅಂತಿಮವಾಗಿ ಮೊರ್ಕೆಲ್ ನೇಮಕವಾಗಿರುವುದನ್ನು ಜಯ್ ಷಾ ಬಹಿರಂಗಪಡಿಸಿದ್ದು, ಗಂಭೀರ್ ಬೇಡಿಕೆಗೆ ಬಿಸಿಸಿಐ ಮಣಿದಂತಿದೆ.
ಸದ್ಯ ಮೊರ್ಕೆಲ್ ಅಧಿಕೃತವಾಗಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದು, ಈ ಹಿಂದಿನ ಕೋಚ್ ಪರಾಸ್ ಮಾಂಬ್ರೆ ಬದಲಾವಣೆ ಆಗಿದೆ. ಸೆಪ್ಟೆಂಬರ್ 1 ರಿಂದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಮೊರ್ಕೆಲ್ ಅವರು ಕೋಚ್ ಜವಾಬ್ದಾರಿ ಆರಂಭವಾಗಲಿದೆ.
ಬೌಲಿಂಗ್ ಕೋಚ್ ನೇಮಕದಿಂದಾಗಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮೊರ್ಕೆಲ್ ಅವರ ಪುನರ್ಮಿಲನವಾಗಿದೆ. ಏಕೆಂದರೆ, ಇವರಿಬ್ಬರು ಐಪಿಎಲ್‌ನಲ್ಲಿ ಮೂರು ಸೀಸನ್‌ಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಸಹ ಆಟಗಾರರಾಗಿದ್ದರು. ಅಲ್ಲದೆ, ಲಖನೌ ಸೂಪರ್ ಜೈಂಟ್ಸ್‌ನ ಕೋಚಿಂಗ್ ವಿಭಾಗದಲ್ಲೂ ಒಟ್ಟಿಗೆ ಇದ್ದರು.
ಮೊರ್ಕೆಲ್ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡಕ್ಕೆ ತರಬೇತಿ ನೀಡಿದ್ದರು. ತಮ್ಮ ಒಪ್ಪಂದದ ಅವಧಿ ಮುಗಿಯುವ ತಿಂಗಳುಗಳ ಮುಂಚೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯಿಂದ ಹೊರಬಂದರು. ಮೊರ್ಕೆಲ್ ಅವರ ಕೋಚಿಂಗ್ ಅಡಿಯಲ್ಲಿ ಪಾಕಿಸ್ತಾನವು ಏಕದಿನ ವಿಶ್ವಕಪ್‌ನ ಸೆಮಿ-ಫೈನಲ್ ತಲುಪಲು ಸಹ ವಿಫಲವಾಯಿತು.
ಮೊರ್ಕೆಲ್ ಅವರು ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ನಲ್ಲಿ ಪರಿಣಾಮಕಾರಿ ತರಬೇತುದಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಮೊರ್ಕೆಲ್ 2018ರಲ್ಲಿ 39 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಮೊರ್ಕೆಲ್ ತಾಂತ್ರಿಕ ವಿಷಯಗಳಲ್ಲಿ ಚೆನ್ನಾಗಿ ಪರಿಣತರಾಗಿದ್ದಾರೆ. 2006-2018ರ ನಡುವೆ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್ ಮತ್ತು 117 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, 44 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಮೊರ್ಕೆಲ್ ಅವರು ಕೋಚ್ ಆಗಿ ಅಪಾರ ಅನುಭವ ಹೊಂದಿದ್ದಾರೆ. (ಏಜೆನ್ಸೀಸ್)