ಮೊಹಮ್ಮದ್ ಸಿರಾಜ್​ ಓರ್ವ... ವಿವಾದದ ನಡುವೆಯೇ ಆಸಿಸ್​ ಸ್ಟಾರ್​ ವೇಗಿಯಿಂದ ಅಚ್ಚರಿ ಹೇಳಿಕೆ! Mohammed Siraj

Mohammed Siraj
Published on

Mohammed Siraj : ಅಡಿಲೇಡ್​ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಬಳಿಕ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಅಭಿಮಾನಿಗಳ ಪಾಲಿಗೆ ವಿಲನ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಕಾರಣ ಈ ಪಂದ್ಯದಲ್ಲಿ ಆಸೀಸ್ ಸ್ಟಾರ್​ ಬ್ಯಾಟ್ಸ್​ಮನ್​ ಟ್ರಾವಿಸ್ ಹೆಡ್ ಜತೆ ಸಿರಾಜ್ ನಡೆಸಿದ ವಾಗ್ವಾದ.

ಟ್ರಾವಿಸ್ ಹೆಡ್ ಅವರನ್ನು ಔಟ್​ ಮಾಡುತ್ತಿದ್ದಂತೆ ಸಿರಾಜ್ ಅವರು ತೋರಿದ ಅತಿಯಾದ ಉತ್ಸಾಹವು ಭಾರೀ ಟೀಕೆಗೆ ಗುರಿಯಾಯಿತು. ಹೆಡ್‌ಗಿಂತ ಮೊದಲು ಮಾರ್ನಸ್ ಲಬುಸೇನ್ ಅವ​ರೊಂದಿಗೆ ಸಿರಾಜ್​ ವಾಗ್ವಾದ ನಡೆಸಿದ್ದರು. ಹೀಗಾಗಿ ಸಿರಾಜ್ ವಿರುದ್ಧ ಆಸೀಸ್ ಆಟಗಾರರು ಹಾಗೂ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಸುನಿಲ್ ಗವಾಸ್ಕರ್ ಅವರಂತಹ ಭಾರತೀಯ ಕ್ರಿಕೆಟ್​ ದಿಗ್ಗಜರು ಸಹ ಸಿರಾಜ್ ಅವರ ನಡವಳಿಕೆಯನ್ನು ಟೀಕಿಸಿದ್ದಾರೆ. ಕೊನೆಗೆ ಐಸಿಸಿ ಕೂಡ ಸಿರಾಜ್​ ಅವರಿಗೆ ಶಾಕ್ ನೀಡಿದ್ದು, ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದೆ.

ಇದೆಲ್ಲದರ ನಡುವೆ ಆಸೀಸ್ ಸ್ಟಾರ್ ವೇಗಿ ಜೋಶ್ ಹ್ಯಾಸಲ್​ವುಡ್​ ಅವರು ಸಿರಾಜ್ ಅವರನ್ನು ಹೊಗಳಿರುವುದು ಗಮನಾರ್ಹ ಸಂಗತಿಯಾಗಿದೆ. ಸಿರಾಜ್​ ಓರ್ವ ಉತ್ತಮ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ಅಂದಹಾಗೆ ಐಪಿಎಲ್‌ನಲ್ಲಿ ಸಿರಾಜ್ ಮತ್ತು ಹ್ಯಾಸಲ್​​ವುಡ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ಪರ ಒಟ್ಟಿಗೆ ಆಡಿದ್ದು ಗೊತ್ತೇ ಇದೆ.

ಸಿರಾಜ್ ತುಂಬಾ ಒಳ್ಳೆಯವರು. ಆದರೆ ಕೆಲವೊಮ್ಮೆ ಅವರು ಆಕ್ರಮಣಕಾರಿಯಾಗಿರಬಹುದು. ಆರ್‌ಸಿಬಿಯಲ್ಲಿ ಸಿರಾಜ್ ಅವರೊಂದಿಗೆ ಕಳೆದ ಸಮಯವನ್ನು ನಿಜವಾಗಿಯೂ ಆನಂದಿಸಿದ್ದೇನೆ. ವಿರಾಟ್ ಕೊಹ್ಲಿಯಂತೆ ಸಿರಾಜ್​ ಕೂಡ ತುಂಬಾ ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದಾರೆ. ಅವರು ತುಂಬಾ ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂದು ಹ್ಯಾಸಲ್​ವುಡ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮೈದಾನಕ್ಕಿಳಿದಾಗಲೆಲ್ಲ ಸಿರಾಜ್​ ಅವರು ತಮ್ಮ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೆಲ ಐಪಿಎಲ್ ಸೀಸನ್‌ಗಳಲ್ಲಿ ಸಿರಾಜ್ ಅವರು ಕೆಲವು ಅದ್ಭುತ ಬೌಲಿಂಗ್ ಸ್ಪೆಲ್‌ಗಳನ್ನು ಎಸೆದಿದ್ದಾರೆ ಎಂದು ಹ್ಯಾಸಲ್‌ವುಡ್ ಸಿರಾಜ್​ ಅವರನ್ನು ಕೊಂಡಾಡಿದ್ದಾರೆ. ಅಂದಹಾಗೆ ಹ್ಯಾಸಲ್​ವುಡ್​ ಅವರು ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವುದು ಗೊತ್ತೇ ಇದೆ.

ಈಗಾಗಲೇ ಟೀಮ್​ ಇಂಡಿಯಾ ಆಸಿಸ್​ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳನ್ನು ಆಡಿದೆ. ಪರ್ತ್​ನಲ್ಲಿ ನಡೆದ ಟೆಸ್ಟ್​ನಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ, ಅಡಿಲೇಡ್​ನಲ್ಲಿ ನಡೆದ ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಹೀನಾಯವಾಗಿ ಸೋಲುಂಡಿತು. ಈ ಮೂಲಕ ಟೆಸ್ಟ್​ ಸರಣಿಯಲ್ಲಿ 1-1ರ ಮೂಲಕ ಸಮಬಲ ಕಾಯ್ದುಕೊಂಡಿದೆ. ಇನ್ನುಳಿದ ಮೂರು ಟೆಸ್ಟ್​ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net