

ನವದೆಹಲಿ: ಟೀಮ್ ಇಂಡಿಯಾ ( Team India ) ದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ವಿಮಾನ ಏರುವ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದ ಕಳೆದ ವರ್ಷದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಶಮಿ, ಡಿಸೆಂಬರ್ 26ರಿಂದ ಪ್ರಾರಂಭವಾಗುವ ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದೊಂದಿಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಶಮಿ ಲಭ್ಯವಾಗುವ ಸಾಧ್ಯತೆಯಿದೆ.
ಪಾದದ ಗಾಯದಿಂದ ಚೇತರಿಸಿಕೊಂಡಿರುವ ಶಮಿ, ಈ ವರ್ಷದ ರಣಜಿ ಟ್ರೋಫಿಯಲ್ಲಿ ಆಡುವ ಮೂಲಕ ಮೈದಾನಕ್ಕೆ ಮರಳಿದರು. ಶಮಿ ಅವರು ರಣಜಿಯಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದರು. ಸದ್ಯ ಶಮಿ ಅವರು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಶಮಿ ಅವರು ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿದ್ದರೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಿಂದ ಇನ್ನೂ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದಿಲ್ಲ.
ಇನ್ನೆರಡು ದಿನದಲ್ಲಿ ಎನ್ಸಿಎ ವೈದ್ಯಕೀಯ ತಂಡ ಶಮಿ ಅವರ ಫಿಟ್‌ನೆಸ್ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಶಮಿ ಏನಾದರೂ ಪಾಸ್ ಆದರೆ, ತಕ್ಷಣವೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ಡಿಸೆಂಬರ್ 14ರಿಂದ ಬ್ರಿಸ್ಬೇನ್ ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಶಮಿ ಅಲಭ್ಯರಾಗುವ ಸಾಧ್ಯತೆ ಇದೆ. ಇದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮ ಕೂಡ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತಕ್ಕೆ ಮೊಹಮ್ಮದ್ ಶಮಿ ಸೇವೆಯ ಅಗತ್ಯವಿದೆ ಎಂದು ಅಲಿ ನಂಬಿದ್ದಾರೆ. ಮೊಹಮ್ಮದ್ ಶಮಿ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಆಡುತ್ತಾರೆ ಎಂಬ ವರದಿಗಳಿವೆ. ಆದರೆ, ನಾಲ್ಕನೇ ಟೆಸ್ಟ್‌ನಿಂದ ಅವರನ್ನು ಕಣಕ್ಕಿಳಿಸಿವುದರಿಂದ ಭಾರತಕ್ಕೆ ಪ್ರಯೋಜನವಾಗುವುದಿಲ್ಲ. ಶಮಿಯನ್ನು ಈಗಲೇ ಆಸ್ಟ್ರೇಲಿಯಾಕ್ಕೆ ಕಳುಹಿಸಿ, ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಆಡಿಸಿ ಎಂದು ಬಸಿತ್ ಅಲಿ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾ ಆಸಿಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಪರ್ತ್ನಲ್ಲಿ ನಡೆದ ಟೆಸ್ಟ್‌ನಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ, ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋಲುಂಡಿತು. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-1ರ ಮೂಲಕ ಸಮಬಲ ಕಾಯ್ದುಕೊಂಡಿದೆ. ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. (ಏಜೆನ್ಸೀಸ್)