

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ ಪಂದ್ಯದಲ್ಲಿ ಶುಕ್ರವಾರ 3 ವಿಕೆಟ್ಗೆ 180 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಕಿವೀಸ್ ಪಡೆ, ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ (65 ರನ್, 73 ಎಸೆತ, 5 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾದ ನೆರವಿನಿಂದ 91.3 ಓವರ್ಗಳಲ್ಲಿ 402 ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 356 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮ (52 ರನ್, 63 ಎಸೆತ, 8 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ನೀಡಿದ್ದೇ ಆದರೂ ಟೀ ಬ್ರೇಕ್ ನಂತರ ಅಬ್ಬರಿಸಿದ್ದು, ವಿರಾಟ್ ಕೊಹ್ಲಿ ಮತ್ತು ಸರ್ಫ್ರಾಜ್ ಖಾನ್ ಜತೆಯಾಟ (Mohammed Siraj Bowling).
ವಿರಾಟ್-ಸರ್ಫ್ರಾಜ್ ಖಾನ್ ಬ್ಯಾಟಿಂಗ್ ಬಲದಿಂದ ದಿನದಂತ್ಯಕ್ಕೆ 49 ಓವರ್ಗಳಲ್ಲಿ 3 ವಿಕೆಟ್ಗೆ 231 ರನ್ಗಳಿಸಿರುವ ಭಾರತ, ಇನ್ನೂ 125 ರನ್ ಹಿನ್ನಡೆಯಲ್ಲಿದೆ. ಕ್ರೀಸ್ ಕಚ್ಚಿ ನಿಂತಿದ್ದ ವಿರಾಟ್ ಕೊಹ್ಲಿ ದಿನದ ಕಡೆಯ ಎಸೆತದಲ್ಲಿ ಗ್ಲೆನ್ ಫಿಲಿಪ್ಸ್ಗೆ ವಿಕೆಟ್ ಒಪ್ಪಿಸಿದ್ದು, ಟೀಮ್ ಇಂಡಿಯಾಗೆ ಹಿನ್ನಡೆ ಅನಿಸಿದೆ. ಸರ್ಫ್ರಾಜ್ ಖಾನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಪಂದ್ಯದಲ್ಲಿ ಇನ್ನೂ 2 ದಿನ ಬಾಕಿಯಿದೆ. ಇನ್ನು ಕಿವೀಸ್ ಎದುರು ಉತ್ತಮ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಂದು ಭಾರತಕ್ಕಾಗಿ ಮೊಹಮ್ಮದ್ ಸಿರಾಜ್ ನಡೆಸಿದ ಬೌಲಿಂಗ್ ದಾಳಿ ಬಗ್ಗೆ ನನಗೆ ಖುಷಿಯಿದೆ. ಏಕೆಂದರೆ, ಸಿರಾಜ್ರಿಂದ ಇಂತಹ ಪ್ರದರ್ಶನ ನಾನು ನಿರೀಕ್ಷಿಸಿರಲಿಲ್ಲ. ನನ್ನ ಪ್ರಕಾರ, ಕ್ಯಾಪ್ಟನ್ ರೋಹಿತ್ ಒಬ್ಬ ಸ್ಪಿನ್ನರ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಲು ಪ್ರಾರಂಭಿಸುತ್ತಾರೆ ಎಂದು ಅಂದುಕೊಂಡಿದ್ದೆ. ಆದ್ರೆ, ವೇಗಿಗಳಿಂದ ಶುರು ಮಾಡಿದ ರೋಹಿತ್, ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಅಖಾಡಕ್ಕಿಳಿಸಿದರು. ಬಿಗಿಯಾದ ಬೌಲಿಂಗ್ ದಾಳಿಯಿಂದ ಇಬ್ಬರು ವಿಕೆಟ್ ಪಡೆದುಕೊಂಡಿದ್ದು ನನಗೆ ಖುಷಿ ನೀಡಿತು" ಎಂದರು.
"ಕಳೆದ ಕೆಲವು ತಿಂಗಳುಗಳಲ್ಲಿ ಸಿರಾಜ್ ತಂಡಕ್ಕೆ ಉತ್ತಮ ಕೊಡುಗೆ ನೀಡಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಅವರ ಮೇಲಿರುವ ಅಪಾರ ನಿರೀಕ್ಷೆಗಳು ಕುಸಿದಿತ್ತು. ಏಕೆಂದರೆ, ಸಿರಾಜ್ ಅಷ್ಟಾಗಿ ಪ್ರಭಾವಶಾಲಿಯಾಗಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್ ತೆಗೆದುಕೊಳ್ಳುವ ಅವರ ಸಾಮರ್ಥ್ಯ ಕಡಿಮೆಯಾಗಿದೆ. ಇದು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಮೇಲೂ ಪರಿಣಾಮ ಬೀರಿದೆ. ಆದ್ರೆ, ಇದೀಗ ಸಿರಾಜ್ ಅದನ್ನೆಲ್ಲ ಬದಿಗಿಟ್ಟು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನನ್ನ ಈ ಮಾತುಗಳನ್ನು ಕೇಳಿದ ಮೇಲೆ ಬಹುಶಃ ಡಿಎಸ್ಪಿ ಆಗಿರುವ ಮೊಹಮ್ಮದ್ ಸಿರಾಜ್ ಅವರು ನನ್ನ ವಿರುದ್ಧ ವಾರೆಂಟ್ ಜಾರಿಗೊಳಿಸಬಹುದು" ಎಂದು ಆಕಾಶ್ ಚೋಪ್ರಾ ಹಾಸ್ಯಸ್ಪದವಾಗಿ ಹೇಳಿದ್ದಾರೆ,(ಏಜೆನ್ಸೀಸ್).