

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಒಂದು ಸರಳ ಪ್ರೇಮಕಥೆ' ಚಿತ್ರದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಸಿಂಪಲ್ ಸುನಿ ಹೊಸ ಕಥೆ ಮತ್ತು ಹೊಚ್ಚ ಹೊಸ ಪ್ರತಿಭೆಗಳ ತಂಡದೊಂದಿಗೆ ವಾಪಸ್ಸಾಗಿದ್ದಾರೆ. ಚಿತ್ರದ ಹೆಸರು "ದೇವರು ರುಜು ಮಾಡಿದನು'. ಹೊಸ ಟ್ಯಾಲೆಂಟ್ಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಸುನಿ, "… ಪ್ರೇಮಕಥೆ'ಯ ಮೂಲಕ ತಮಿಳಿನ "ವಿಕ್ರಮ್' ಚಿತ್ರದ ಖ್ಯಾತಿಯ ಸ್ವಾತಿಷ್ಠ ಕೃಷ್ಣನ್ ಮತ್ತು ಹಿಂದಿಯ ಜನಪ್ರಿಯ "ರಾಧಾಕೃಷ್ಣ' ಧಾರಾವಾಹಿಯ ರಾಧೆ ಮಲ್ಲಿಕಾ ಸಿಂಗ್ರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದರು. ಇದೀಗ "ದೇವರು ರುಜು ಮಾಡಿದನು' ಚಿತ್ರದ ಮೂಲಕ ಸುನಿ, ಯುವ ಪ್ರತಿಭೆ ವಿರಾಜ್ ಸ್ಯಾಂಡಲ್ವುಡ್ಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಜತೆಗೆ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಹೊಸ ಪ್ರತಿಭೆಗಳನ್ನೇ ಸುನಿ ಪರಿಚಯಿಸುತ್ತಿದ್ದಾರೆ.
ಕೀರ್ತಿ ಕೃಷ್ಣ ರುಜು ಮಾಡಿದರು
ನಟ ಶರಣ್ ಮತ್ತು ನಟಿ ಶ್ರುತಿ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಣ್ಣ&ತಂಗಿ. ಜತೆಗೆ ಶರಣ್ ಪುತ್ರ ಹೃದಯ್ ಈಗಾಗಲೇ "ಗುರು ಶಿಷ್ಯರು' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಬೆನ್ನಲ್ಲೇ ಶರಣ್ ಮತ್ತೊಬ್ಬ ಸಹೋದರಿ ಉಷಾ ಪುತ್ರಿ ಕೀರ್ತಿ ಕೃಷ್ಣ ಕೂಡ ಇದೀಗ ನಾಯಕಿಯಾಗಿ "ದೇವರು ರುಜು ಮಾಡಿದನು' ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸ್ಟುಡಿಯೋದಲ್ಲಿ ನಟನಾ ತರಬೇತಿ ಪಡೆದಿರುವ ಕೀರ್ತಿ, ಈ ಚಿತ್ರದಲ್ಲಿ ಸಂಗೀತವೇ ತನ್ನ ಪ್ರಪಂಚ ಎಂದು ಜೀವಿಸುವ "ಸುಶ್ರಾವ್ಯ' ಎಂದು ವೀಣಾ ವಾದಕಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮಾಡೆಲ್ ದಿವಿತಾ, ಚಿತ್ರರಂಗಕ್ಕೆ ಜಿಗಿತ
ಕೀರ್ತಿ ಕೃಷ್ಣ ಜತೆ 2022ರ ಮಿಸ್ ಇಂಡಿಯಾ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದ ಮಂಗಳೂರು ಹುಡುಗಿ ದಿವಿತಾ ರೈ, ಇದೀಗ "ದೇವರು ರುಜು ಮಾಡಿದನು' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಒಂದು ಬಾಲಿವುಡ್ ಚಿತ್ರದಲ್ಲಿ ನಟಿಸಿರುವ ಅವರು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದು, ಅದರ ನಡುವೆ ಸಿಂಪಲ್ ಸುನಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಡೆಬ್ಯೂ ಮಾಡುತ್ತಿದ್ದಾರೆ. ಕೊಂಕಣಿ ಸಮುದಾಯಕ್ಕೆ ಸೇರಿದ ಸಿಂಗರ್ ಪಾತ್ರದಲ್ಲಿ ದಿವಿತಾ ರೈ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಾಯಕ ಮತ್ತು ನಾಯಕಿಯರನ್ನು ಚಿತ್ರತಂಡ ಪರಿಚಯಿಸಿದ್ದು, ಉಳಿದ ತಾರಾಗಣದ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
ಉಳಿದಂತೆ ಚಿತ್ರಕ್ಕೆ ಜೆಜೆ, ಜೇಡ್ ಸ್ಯಾಂಡಿ, ಜೂಡಾ ಸ್ಯಾಂಡಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರಲಿದೆ. ನಾಳೆ "ದೇವರು ರುಜು ಮಾಡಿದನು' ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ನಂತರ ಶೂಟಿಂಗ್ ಮುಂದುವರಿಸಲು ಸುನಿ ಪ್ಲಾನ್ ಮಾಡಿಕೊಂಡಿದ್ದಾರೆ.